ಬಿಜೆಪಿ ಮೊದಲ ಪಟ್ಟಿ ಸಿದ್ಧ, ಶೋಭಾ ಸ್ಪರ್ಧೆಗೆ ಸಿ.ಟಿ.ರವಿ ವಿರೋಧ
ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಫೈಟ್ ಆರಂಭ..
ಬೆಂಗಳೂರು: ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಫೈಟ್ ಆರಂಭವಾಗಿದೆ. ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಳೆಯದಲ್ಲಿ ಈಗಾಗಲೇ ಬಿರುಸಿನ ಚಟುವಟಿಕೆಗಳು ನಡೆದಿದ್ದು, ಬಹುತೇಕ ಎಲ್ಲ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಖೈರುಗೊಂಡಿದ್ದರೂ, ಯಾವುದೇ ಪಕ್ಷ ಇದುವರೆಗೂ ಪಟ್ಟಿ ಬಿಡುಗಡೆ ಮಾಡಿಲ್ಲ.
ಈ ನಡುವೆ ಬಿಜೆಪಿಯು ರಾಜ್ಯದ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿದೆ. ಬೆಂಗಳೂರು ಉತ್ತರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಇದೀಗ ಪರಿಹಾರಗೊಂಡಿದ್ದು, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಸ್ಪರ್ಧಿಸುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಹಿಂದೇಟು ಹಾಕಿದ್ದರಿಂದ ಸದಾನಂದಗೌಡ ಹೆಸರನ್ನೇ ರಾಜ್ಯ ಘಟಕ ಅಂತಿಮಗೊಳಿಸಿದೆ. ಅಶೋಕ ತಮ್ಮ ಬದಲಿಗೆ ಮಲ್ಲೇಶ್ವರ ಶಾಸಕ ಅಶ್ವತ್ಥನಾರಾಯಣ ಅವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ ಪಕ್ಷದ ವರಿಷ್ಠರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಸದಾನಂದಗೌಡ ಅವರ ಹೆಸರನ್ನೇ ಅಂತಿಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಹಿಂದೆ ಡಿ.ವಿ.ಸದಾನಂದಗೌಡ ಪ್ರತಿನಿಧಿಸುತ್ತಿದ್ದ ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡುವುದಕ್ಕೆ ಪಕ್ಷದಲ್ಲಿ ವಿರೋಧ ವ್ಯಕ್ತವಾಗಿದೆ.
ಈ ಸಂಬಂಧ ನಿನ್ನೆ ದೆಹಲಿಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಚಿಕ್ಕಮಗಳೂರು ಶಾಸಕ, ಮಾಜಿ ಸಚಿವ ಸಿ.ಟಿ.ರವಿ ಅವರು ಶೋಭಾ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಶಾಸಕರಾದ ಡಿ.ಎನ್.ಜೀವರಾಜ್ ಮತ್ತು ಸುನಿಲ್ ಅವರು ಶೋಭಾ ಬೆಂಬಲಕ್ಕೆ ನಿಂತಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದ ಅಭ್ಯರ್ಥಿಗಳು
- ಬೆಂಗಳೂರು ದಕ್ಷಿಣ-ಎಚ್.ಎನ್.ಆನಂತ್‌ಕುಮಾರ್
- ಬೆಂಗಳೂರು ಉತ್ತರ- ಡಿ.ವಿ.ಸದಾನಂದಗೌಡ
- ಬೆಂಗಳೂರು ಕೇಂದ್ರ- ಪಿ.ಸಿ.ಮೋಹನ್
- ಬೆಂಗಳೂರು ಗ್ರಾಮಾಂತರ- ಸಿ.ಮುನಿರಾಜು
- ಚಿಕ್ಕಬಳ್ಳಾಪುರ- ಬಿ.ಎನ್.ಬಚ್ಚೇಗೌಡ
- ಶಿವಮೊಗ್ಗ- ಬಿ.ಎಸ್.ಯಡಿಯೂರಪ್ಪ
- ದಕ್ಷಿಣ ಕನ್ನಡ- ನಳಿನ್ ಕುಮಾರ್ ಕಟೀಲು
- ಚಿಕ್ಕಮಗಳೂರು, ಉಡುಪಿ- ಶೋಭಾ ಕರಂದ್ಲಾಜೆ
- ಗುಲ್ಬರ್ಗಾ- ರೇವುನಾಯಕ್ ಬೆಳಮಗಿ
- ಬೆಳಗಾವಿ- ಸುರೇಶ್ ಅಂಗಡಿ
- ಚಿಕ್ಕೋಡಿ- ರಮೇಶ್ ಕತ್ತಿ
- ಧಾರವಾಡ- ಪ್ರಹ್ಲಾದ್ ಜೋಶಿ
- ಬಾಗಲಕೋಟೆ- ಗದ್ದಿಗೌಡರ
- ದಾವಣಗೆರೆ- ಜಿ.ಎಂ.ಸಿದ್ದೇಶ್
- ಚಿತ್ರದುರ್ಗ-ಜನಾರ್ಧನ್ ಸ್ವಾಮಿ
- ಚಾಮರಾಜನಗರ- ಎ.ಕೃಷ್ಣಮೂರ್ತಿ
- ಹಾವೇರಿ- ಶಿವಕುಮಾರ್ ಉದಾಸಿ
- ಬಿಜಾಪುರ- ರಮೇಶ್ ಜಿಗಜಿಣಗಿ