ಹೆಚ್ಚಿನ ಕಾನೂನು ಭದ್ರತೆಗಾಗಿ ಬಿಜೆಪಿ ಮನವಿ
ದೇವಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾದೇವಿ ಪತಿಯನ್ನು ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ...
ಬೆಂಗಳೂರು: ದೇವಸಂದ್ರ ವಾರ್ಡ್ ಪಾಲಿಕೆ ಸದಸ್ಯೆ ಮಂಜುಳಾದೇವಿ ಪತಿಯನ್ನು ಹಾಡ
ಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೆಚ್ಚಿನ ಕಾನೂನು ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ಬಿಜೆಪಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕಳೆದ 8 ತಿಂಗಳಿನಲ್ಲಿ ರಾಜ್ಯದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚಳವಾಗಿದೆ. ಬೆಂಗಳೂರು ಮಾತ್ರವಲ್ಲದೆ, ಹುಬ್ಬಳ್ಳಿ, ಶಿರಾ, ಚಿಕ್ಕಮಗಳೂರು, ಉಳ್ಳಾಲ ಸೇರಿದಂತೆ ಕರಾವಳಿ ಪ್ರದೇಶಗಳಲ್ಲೂ ಅಪರಾಧ ಸಂಖ್ಯೆ ಗಣನೀಯವಾಗಿ ಏರಿದೆ.
ಕರಾವಳಿ ಜಿಲ್ಲೆಗಳಲ್ಲಿ ಭೂಗತ ಪಾತಕಿಗಳ ಅಟ್ಟಹಾಸ ಜಾಸ್ತಿಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಆರ್. ಎನ್ ನಾಯಕ್ ಕೊಲೆಯಾಗಿರುವುದು ಇದಕ್ಕೆ ನಿದರ್ಶನ.
ಅದೇ ವೇಳೆ ಗುಲ್ಬರ್ಗಾದಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಬೆಂಡೆಯವರ ಕಗ್ಗೊಲೆಯೂ ಭೂಗತ ಪಾತಕಿಗಳ ಅರ್ಭಟಕ್ಕೆ ಉದಾಹರಣೆಯಾಗಿದೆ.
ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 1,350 ಕೊಲೆ, 5,560 ಗಲಭೆ ಮತ್ತು 824 ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಭದ್ರತೆ ಮತ್ತು ಕಾನೂನು ವ್ಯವಸ್ಥೆಗಳನ್ನು ಕಲ್ಪಿಸಬೇಕು ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ.