ಕಲೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮ: ಡಾ. ಚೂಡಾಮಣಿ ನಂದಗೋಪಾಲ್
ಕಲೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮ. ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೆ ಮಾತ್ರ ಕಲೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು...
ಬೆಂಗಳೂರು: ಕಲೆ ಎಂಬುದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಾಧ್ಯಮ. ಅಭಿವ್ಯಕ್ತಿ ಸ್ವಾತಂತ್ರ್ಯವಿದ್ದರೆ ಮಾತ್ರ ಕಲೆಯಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಸಾಧ್ಯ. ಇಂಥಾ ಸ್ವಾತಂತ್ರ್ಯವನ್ನು ಅನುಭವಿಸಿದ ಮಹಿಳೆಯರು ಎಲ್ಲರೂ ಒಟ್ಟಾಗಿ ಏರ್ಪಡಿಸಿದ ಕಲಾಪ್ರದರ್ಶನದ ಹೆಸರೇ ಅಕಾಂಕ್ಷ. ಶನಿವಾರ ಮಹಿಳಾ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಆರಂಭವಾದ ಆಕಾಂಕ್ಷ ಚಿತ್ರಕಲಾ ಪ್ರದರ್ಶನದ ವೈಶಿಷ್ಟ್ಯವೇ ಅದು. 50 ಕಲಾವಿದೆಯರು ಸೇರಿ ನಡೆಸಿದ ಈ ಚಿತ್ರಕಲಾ ಪ್ರದರ್ಶನದಲ್ಲಿ ಒಂದಕ್ಕಿಂತ ಒಂದು ಮಿಗಿಲು ಎಂದೆನಿಸುವ ವರ್ಣಮಯ ಚಿತ್ರಗಳು ಜನರ ಕಣ್ಮನ ಸೆಳೆದವು.
ತಮ್ಮ ಎಲ್ಲ ಜವಾಬ್ದಾರಿಗಳ ನಡುವೆಯೂ ತಮ್ಮ ಕನಸುಗಳನ್ನು ಸಾಕಾರಗೊಳಿಸಲು ಹೆಜ್ಜೆ ಹಾಕುತ್ತಿರುವ ಹಿರಿಯ ಕಿರಿಯ ಕಲಾವಿದೆಯರೆಲ್ಲ ಸೇರಿ ತಮ್ಮ ವರ್ಣಮಯ ಕನಸುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸುತ್ತಿರುವು ಇದೇ ಮೊದಲು.
ಕಲೆ ಎಂಬುದು ಸುಂದರವಾದ ಭಾವ. ತಮ್ಮ ಮನಸ್ಸಿನ ಭಾವನೆಗಳನ್ನು ಚಿತ್ರಗಳ ಮೂಲಕ ಮಹಿಳೆಯರು ಇಲ್ಲಿ ಹಿಡಿದಿಟ್ಟಿದ್ದಾರೆ. ಈ ಮೂಲಕ ಅವರು ತಮ್ಮ ಸಂತೋಷವನ್ನೂ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನೂ ವ್ಯಕ್ತ ಪಡಿಸಿದ್ದಾರೆ. ಇಲ್ಲಿರುವವರು ಯಾರೂ ಪ್ರಖ್ಯಾತ ಕಲಾವಿದೆಯರಲ್ಲ. ಎಲ್ಲರೂ ತಮ್ಮ ಬಿಡುವು ಸಮಯದಲ್ಲಿ, ತಮ್ಮ ಮನಸ್ಸಿನ ಖುಷಿಗಾಗಿ ಚಿತ್ರಗಳನ್ನು ಬಿಡಿಸಿದವರು. ಅಂಥಾ ಹಿರಿಯ ಕಿರಿಯ ಕಲಾವಿದರ ಚಿತ್ರಗಳು ಇಲ್ಲಿ ಅನಾವರಣಗೊಳ್ಳುತ್ತಿರುವುದು ಖುಷಿಯ ವಿಚಾರ ಎಂದು ಕಲಾಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಡಾ. ಚೂಡಾಮಣಿ ನಂದಗೋಪಾಲ್ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಒಲಿಂಪಿಯನ್ ಕ್ರೀಡಾಪಟು ಅಶ್ವಿನಿ ನಾಚಪ್ಪ, ಮಹಿಳೆಗೆ ಪ್ರೇರಣೆ, ಪ್ರೋತ್ಸಾಹ ನೀಡುವ ಕಾರ್ಯಗಳು ಮನೆಯಿಂದಲೇ ಶುರುವಾಗಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಂಧ್ಯಾ ಕಿರಣ್ (ಖ್ಯಾತ ನಾಟ್ಯ ಕಲಾವಿದೆ) , ಡಾ ಜಯಾ ನರೇಂದ್ರ (ಖ್ಯಾತ ಪ್ರಸೂತಿ ತಜ್ಞೆ) , ಸ್ಮಿತಾ ಬೆಳ್ಳೂರು (ಹಿಂದೂಸ್ತಾನಿ ಗಾಯಕಿ) ಮೊದಲಾದವರು ಉಪಸ್ಥಿತರಿದ್ದರು.
ಬೆಂಗಳೂರಿನ ಕುಮಾರಪಾರ್ಕ್ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ 8,9,10 ಮೂರು ದಿನಗಳ ಕಾಲ ಆಕಾಂಕ್ಷ ಚಿತ್ರಕಲಾಪ್ರದರ್ಶನ ನಡೆಯಲಿದೆ.