ಮಲೇಷ್ಯಾ ವಿಮಾನ ನಾಪತ್ತೆ ಇನ್ನೂ ನಿಗೂಢ
ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣ ಮೂರು ದಿನ ಕಳೆದರೂ ಇನ್ನು ನಿಗೂಢವಾಗಿಯೇ ಉಳಿದಿದೆ...
ಕೌಲಾಲಂಪುರ: ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣ ಮೂರು ದಿನ ಕಳೆದರೂ ಇನ್ನೂ ನಿಗೂಢವಾಗಿಯೇ ಉಳಿದಿದೆ. ವಿಮಾನ ನಾಪತ್ತೆ ಕುರಿತು ಹಲವು ಅನುಮಾನಗಳು ಮೂಡಿದ್ದು, ನಿಜವಾಗಿಯೂ ವಿಮಾನ ದುರಂತಕ್ಕೀಡಾಗಿದೆಯೇ ಅಥವಾ ಬೇರೇನಾದರೂ ನಡೆದಿದೆಯೇ ಎಂಬ ಪ್ರಶ್ನೆ ಮಲೇಷ್ಯಾ ಅಧಿಕಾರಿಗಳನ್ನು ಕಾಡುತ್ತಿದೆ.
ಈ ನಿಗೂಢತೆಯ ನಡುವೆಯೇ ನಾಲ್ವರು ನಕಲಿ ಪಾಸ್‌ಪೋರ್ಟ್ ಬಳಸಿ ವಿಮಾನದಲ್ಲಿ ಪ್ರಯಾಣಿಸಿದ್ದರು ಎಂಬ ಮಾಹಿತಿಯೂ ಬಹಿರಂಗವಾಗಿದ್ದು, ವಿಮಾನ ನಾಪತ್ತೆಯಾಗುವಲ್ಲಿ ಉಗ್ರರ ಕೈವಾಡವಿದೆಯೇ ಎಂಬ ಸಂಶಯವೂ ಮೂಡತೊಡಗಿದೆ.
ಈ ಮಧ್ಯೆ ನಿನ್ನೆ ಪತ್ತೆಯಾದ ವಿಮಾನದ ಅವಶೇಷಗಳು ನಾಪತ್ತೆಯಾದ ಮಲೇಷ್ಯಾ ವಿಮಾನದ ಅವಶೇಷಗಳಲ್ಲ ಎಂದು ಮಲೇಷ್ಯಾ ವಿಮಾನಯಾನ ಅಧಿಕಾರಿಗಳು ಸೋಮವಾರ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ವಿಮಾನವನ್ನು ಉಗ್ರರು ಹೈಜಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆದರೆ ಉಗ್ರರು ಹೈಜಾಕ್ ಮಾಡಿದ್ದೆ ನಿಜವಾಗಿದ್ದರೇ ಅದು ಇಷ್ಟೊತ್ತಿಗಾಗಲೇ ಪತ್ತೆಯಾಗುತ್ತಿತ್ತು. ಏಕೆಂದರೆ ಉಗ್ರರು ವಿಮಾನವನ್ನು ಯಾವುದಾದರೂ ಒಂದು ವಾಯು ನೆಲೆಯಲ್ಲಿ ಲ್ಯಾಂಡ್ ಮಾಡಲೇಬೇಕು. ಅಂತಹ ಯಾವುದೇ ಸುದ್ದಿ ಈವರೆಗೂ ವರದಿಯಾಗದಿರುವುದು ಮತ್ತು ಯಾವುದೇ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತುಕೊಳ್ಳದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಲೇಷ್ಯಾದಿಂದ 239 ಪ್ರಯಾಣಿಕರನ್ನು ಹೊತ್ತು ಬೀಜಿಂಗ್‌ಗೆ ತೆರಳುತ್ತಿದ್ದ ವಿಮಾನ ಶುಕ್ರವಾರ ತಡರಾತ್ರಿಯಿಂದ ನಾಪತ್ತೆಯಾಗಿತ್ತು. ಅದು ಸಮುದ್ರದ ಮಧ್ಯೆ ಪತನಗೊಂಡು ಅದರಲ್ಲಿದ್ದ ಎಲ್ಲರೂ ಮೃತಪಟ್ಟಿರಬಹುದೆಂದು ಶಂಕಿಸಲಾಗಿತ್ತು. ಆದರೆ ಘಟನೆ ನಡೆದು ಮೂರು ದಿನಗಳಾದರೂ ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ. ಅಮೆರಿಕ, ಚೀನಾ, ಸಿಂಗಾಪುರ, ಮಲೇಷ್ಯಾ ಹೀಗೆ ವಿವಿಧ ರಾಷ್ಟ್ರಗಳು ಶೋಧ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರೂ ವಿಮಾನದ ಬಗ್ಗೆ ಒಂದೇ ಒಂದು ಸುಳಿವು ಕೂಡ ಲಭ್ಯವಾಗಿಲ್ಲ. ಹೀಗಾಗಿ ಅಧಿಕಾರಿಗಳಲ್ಲಿ ಹೊಸ ಅನುಮಾನಗಳು ಮೂಡತೊಡಗಿವೆ.
ಮಾರ್ಗ ಬದಲಿಸಿತ್ತೇ ವಿಮಾನ?:
ವಿಮಾನವು ನಿಯಂತ್ರಣ ಕೊಠಡಿಯ ಸಂಪರ್ಕ ಕಡಿದುಕೊಳ್ಳುವ ಮುನ್ನ ತನ್ನ ಮಾರ್ಗ ಬದಲಿಸಿತ್ತೇ? ಹೌದು. ವಿಮಾನವು ಹಿಂದಕ್ಕೆ ತಿರುಗಿತ್ತು ಎನ್ನುತ್ತದೆ ಮಲೇಷ್ಯಾದ ಸೇನಾ ರೇಡಾರ್. ಆದರೆ, ಒಂದು ವೇಳೆ ವಿಮಾನವು ವಾಪಸ್ ಬರುವುದಾದರೆ ಅಥವಾ ತನ್ನ ಪಥ ಬದಲಿಸುವುದಿದ್ದರೆ ಮೊದಲು ನಿಯಂತ್ರಣ ಕೊಠಡಿ ಅಥವಾ ಏರ್‌ಲೈನ್ ಅಧಿಕಾರಿಗಳಿಗೆ ಮಾಹಿತಿ ರವಾನಿಸಬೇಕು. ಆದರೆ ಅಂತಹ ಯಾವುದೇ ಮಾಹಿತಿ ಬಂದಿಲ್ಲ, ಅಪಾಯದ ಮುನ್ಸೂಚನೆಯೂ ಸಿಕ್ಕಿಲ್ಲ ಎನ್ನುತ್ತಾರೆ ಮಲೇಷ್ಯಾ ಏರ್‌ಲೈನ್ಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಹ್ಮದ್ ಜೌಹಾರಿ ಯಾಹ್ಯಾ. ಹಾಗಿದ್ದರೆ ಮಾರ್ಗ ಬದಲಿಸಿದ ವಿಮಾನ ಹೋಗಿದ್ದಾದರೂ ಎಲ್ಲಿಗೆ ಎಂಬುದೂ ಯಕ್ಷಪ್ರಶ್ನೆಯಾಗಿ ಉಳಿದಿದೆ.