ಸುಬ್ರತಾ ರಾಯ್ ಬಂಧನದ ಅವಧಿ ವಿಸ್ತರಣೆ
ತನ್ನ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಹಿಂದೇಟು ಹಾಕುತ್ತಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರ ಜೈಲುವಾಸ...
ನವದೆಹಲಿ: ತನ್ನ ಹೂಡಿಕೆದಾರರಿಗೆ ಹಣ ಹಿಂದಿರುಗಿಸಲು ಹಿಂದೇಟು ಹಾಕುತ್ತಿರುವ ಸಹರಾ ಮುಖ್ಯಸ್ಥ ಸುಬ್ರತಾ ರಾಯ್ ಅವರ ಜೈಲುವಾಸ ಅವಧಿಯನ್ನು ಸೋಮವಾರ ವಿಸ್ತರಿಸಲಾಗಿದೆ.
ಹೂಡಿಕೆದಾರರಿಗೆ ಹಣ ನೀಡುವ ಬಗ್ಗೆ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವಂತೆ ರಾಯ್ಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಆದರೆ ಹಣ ನೀಡದ ಹಿನ್ನಲೆಯಲ್ಲಿ ಇಂದು ಸುಬ್ರತಾ ರಾಯ್ ಅವರ ಜೈಲುವಾಸದ ಅವಧಿಯನ್ನು ವಿಸ್ತರಿಸಿದ್ದು, ಮುಂದಿನ ವಿಚಾರಣೆವರೆಗೂ ಜೈಲುವಾಸ ಅನುಭವಿಸಬೇಕಾಗಿದೆ.
ಮುಂದಿನ ವಿಚಾರಣೆ ಯಾವಾಗ ಎಂಬುದು ಇನ್ನು ನಿಗಧಿಯಾಗಿಲ್ಲ. ಸದ್ಯಕ್ಕೆ ಸುಬ್ರತಾ ರಾಯ್ ತಿಹಾರ ಜೈಲಿನಲ್ಲಿರಬೇಕಾಗಿದೆ.
ಸಹಾರಾ ಸಂಸ್ಥೆಯ ಹೂಡಿಕೆದಾರರ 20,000 ಕೋಟಿ ಮೌಲ್ಯದ ಷೇರುಗಳನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸಮನ್ಸ್ ಜಾರಿಗೊಳಿಸಿತ್ತು. ಆದರೆ ನ್ಯಾಯಾಲಯದ ಮುಂದೆ ಅವರು ಹಾಜರಾಗಲು ವಿಫಲರಾದ ಹಿನ್ನಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿತ್ತು.
ತದ ನಂತರ ಪೊಲೀಸರಿಗೆ ಶರಣಾದ ಸುಬ್ರತಾ ರಾಯ್, ನ್ಯಾಯಾಲಯದಲ್ಲಿ ಕ್ಷಮೆಯಾಚಿಸಿದ್ದರು. ಸುಬ್ರತಾ ರಾಯ್ ಅವರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ, ಬಂಧಿಸಲು ಆದೇಶಿಸಿತ್ತು. ಹೂಡಿಕೆದಾರರ ಹಣ ವಾಪಸ್ ನೀಡಿದ ಮೇಲೆ ಸುಬ್ರತಾ ರಾಯ್ ಬಿಡುಗಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ನ್ಯಾಯಾಲಯ ಹೇಳಿತ್ತು.