ಭಾರತಕ್ಕೆ ಕಾವಲುಗಾರ ಬೇಡ: ರಾಹುಲ್
ಭಾರತಕ್ಕೆ ಕಾವಲುಗಾರ ಬೇಡ ಏಕೆಂದರೆ ಇಲ್ಲಿನ ಜನರಿಗೆ ಬೇಕಾಗಿರುವುದು ಅವರ ಹಕ್ಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...
ಅಹಮದಾಬಾದ್: ಭಾರತಕ್ಕೆ ಕಾವಲುಗಾರ ಬೇಡ ಏಕೆಂದರೆ ಇಲ್ಲಿನ ಜನರಿಗೆ ಬೇಕಾಗಿರುವುದು ಅವರ ಹಕ್ಕು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.
ಪರೋಕ್ಷವಾಗಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್, ಗುಜರಾತ್ ಮುಖ್ಯಮಂತ್ರಿ ದೆಹಲಿ ಜನತೆಯ ಕಾವಲುಗಾರ ಎಂದು ಹೇಳಿಕೊಂಡಿದ್ದಾರೆ. ಆದರೆ ನಮ್ಮ ಜನತೆಗೆ ಕಾವಲುಗಾರ ಬೇಕಾಗಿಲ್ಲ. ಜನತೆಗೆ ಬೇಕಾಗಿರುವುದು ಹಕ್ಕು. ಅದು ನೀಡದರೆ ಸಾಕು ಎಂದು ರಾಹುಲ್ ಹೇಳಿದ್ದಾರೆ.
ಗುಜರಾತ್‌ನಲ್ಲಿ ಜನ ಮಿಂಚುತ್ತಾರೆಂಬುದು ಸುಳ್ಳು, ಕೇವಲ ಹಣ ಇರುವವರು ಮಾತ್ರ ಇಲ್ಲಿ ತಲೆ ಎತ್ತಿದ್ದಾರೆ. ಆದರೆ ಇಲ್ಲಿನ ಬಡ ಜನತೆ ಮತ್ತು ಮಹಿಳೆಯರ ಸಮಸ್ಯೆಗೆ ಸ್ಪಂಧಿಸಲು ಯಾರು ಇಲ್ಲದಂತಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ಸರ್ದಾರ್ ವಲ್ಲಬಾಯ್ ಪಟೇಲ್ ಪ್ರತಿಮೆ ಮಾಡಿಸುವುದು ಒಳ್ಳೆಯದೇ, ಆದರೆ ಅವರ ಪ್ರತಿಮೆ ಅನಾವರಣಕ್ಕೂ ಮುನ್ನ ಅವರ ಬಗ್ಗೆ ತಿಳಿಸಿಕೊಡಬೇಕು. ಅವರ ಸಾಧನೆಯನ್ನು ಪರಿಚಯಿಸಬೇಕು. ಅದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ರಾಹುಲ್ ಹೇಳಿದ್ದಾರೆ.
ಗುಜರಾತ್ ರಾಜ್ಯ ದೇಶಕ್ಕೆ ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಬಾಯ್ ಪಟೇಲ್ ಅಂತಹವರನ್ನು ನೀಡಿದೆ. ಅವರು ಕೇವಲ ವ್ಯಕ್ತಿಗಳಲ್ಲ, ಆದರ್ಶವಾದಿಗಳು. ಬಿಜೆಪಿ ಹೇಳುತ್ತದೆ ಕಾಂಗ್ರೆಸ್‌ನ್ನು ಅಳಿಸಿ ಹಾಕಬೇಕು ಎಂದು, ಆದರೆ ಇಂತಹ ಕಾಂಗ್ರೆಸ್ ಕಟ್ಟಿದವರೇ ಗಾಂಧಿ ಮತ್ತು ಪಟೇಲ್ ಅವರು ಎಂದು ಅವರು ತಿಳಿಸಿದ್ದಾರೆ.