ಚೀನಾ ಸೂಚಿಸಿದ ಜಾಗದಲ್ಲಿ ವಿಮಾನದ ಅವಶೇಷ ಪತ್ತೆಯಾಗಿಲ್ಲ: ಮಲೇಷ್ಯಾ
ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದ್ರದಲ್ಲಿ ವಿಮಾನದ ಅವಶೇಷಗಳಿರುವ ಫೋಟೋ..
ಕೌಲಾಲಂಪುರ: ಮಲೇಷ್ಯಾ ವಿಮಾನ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮುದ್ರದಲ್ಲಿ ವಿಮಾನದ ಅವಶೇಷಗಳಿರುವ ಫೋಟೋವನ್ನು ತಮ್ಮ ಉಪಗ್ರಹ ಸೆರೆ ಹಿಡಿದಿದೆ ಎಂದು ಚೀನಾ ಹೇಳಿತ್ತು. ಆದರೆ ಪ್ರಸ್ತುತ ಪ್ರದೇಶದಲ್ಲಿ ವಿಮಾನದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ಮಲೇಷ್ಯಾ ವೈಮಾನಿಕಯಾನ ಇಲಾಖೆ ಮುಖ್ಯಸ್ಥ ಅಜರುದ್ದೀನ್ ಅಬ್ದುಲ್ ರೆಹಮಾನ್ ಹೇಳಿದ್ದಾರೆ.
ಚೀನಾ ಸೂಚಿಸಿದ ಸ್ಥಳದಲ್ಲಿ ತಾವು ಶೋಧ ನಡೆಸಿದ್ದು, ಅಲ್ಲಿ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ ಎಂದು ಮಲೇಷ್ಯಾ ಹೇಳಿದೆ.
ಆದಾಗ್ಯೂ, ದಿನಗಳ ಹಿಂದೆಯಷ್ಟೇ ಚೀನಾದ ಹೇಳಿರುವ ಜಾಗದಲ್ಲಿ ತಾವು ತೀವ್ರ ಶೋಧ ನಡೆಸಿದ್ದೆವು ಎಂದು ವಿಯೆಟ್ನಾಂ ಅಧಿಕಾರಿಗಳು ಹೇಳಿದ್ದಾರೆ.
239 ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಬೋಯಿಂಗ್ 777 ವಿಮಾನ ಕಳೆದ ಶನಿವಾರ ನಾಪತ್ತೆಯಾಗಿದ್ದು, ವಿಮಾನದ ಶೋಧ ಕಾರ್ಯದಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಭಾಗಿಯಾಗಿವೆ. ಮಲೇಷ್ಯಾ ವಿಮಾನ ನಾಪತ್ತೆಯಾಗಿ ಇಂದಿಗೆ 6 ದಿನಗಳಾಗಿವೆ.
ಮಲೇಷ್ಯಾ ಮತ್ತು ವಿಯೇಟ್ನಾಂ ನಡುವಿನ ಪ್ರದೇಶದಲ್ಲಿ ವಿಮಾನ ಪತ್ತೆಯಾಗಿದೆ ಎಂದು ಚೀನಾದ ಉಪಗ್ರಹ ಫೋಟೋವೊಂದನ್ನು ಆಧರಿಸಿ ಚೀನಾ ಹೇಳಿಕೆ ನೀಡಿತ್ತು. ಆದರೆ ಅಲ್ಲಿ ಶೋಧ ನಡೆಸಿದ ನಂತರ, ವಿಮಾನದ ಅವಶೇಷಗಳು ಯಾವುದೂ ಅಲ್ಲಿ ಪತ್ತೆಯಾಗಿಲ್ಲ ಎಂದು ಮಲೇಷ್ಯಾ ಹೇಳಿದೆ.