ನನ್ನ ಬೆಂಬಲ ಮಮತಾ ಬ್ಯಾನರ್ಜಿಗೆ ಮಾತ್ರ, ಆಕೆಯ ಪಕ್ಷಕ್ಕಲ್ಲ: ಅಣ್ಣಾ
ಎರಡು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ...
ನವದೆಹಲಿ: ಎರಡು ದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನವದೆಹಲಿಯಲ್ಲಿ ನಡೆಸಿದ ರ್ಯಾಲಿಗೆ ಗೈರು ಹಾಜರಾಗಿದ್ದ ಅಣ್ಣಾ, ತಾನು ಮಮತಾ ಬ್ಯಾನರ್ಜಿಯವರಿಗೆ ಮಾತ್ರ ಬೆಂಬಲ ನೀಡುತ್ತೇನೆ, ಆಕೆಯ ಪಕ್ಷಕ್ಕೆ ಅಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಈ ವೇಳೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಅವರನ್ನು ಹೊಗಳಿದ ಅಣ್ಣಾ, ನಾನು ಆಕೆಯನ್ನು ತುಂಬಾ ಗೌರವಿಸುತ್ತೇನೆ. ಮಮತಾ ಈ ದೇಶದ ಪ್ರಧಾನಿ ಮಂತ್ರಿಯಾಗಲು ಅರ್ಹಳು ಎಂದಿದ್ದಾರೆ.
ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಪಕ್ಷ ಮತ್ತು ಅಣ್ಣಾ ಹಜಾರೆ ದೆಹಲಿಯಲ್ಲಿ ಹಮ್ಮಿಕೊಂಡ ಜಂಟಿ ರ್ಯಾಲಿಗೆ ಅಣ್ಣಾ ಗೈರು ಹಾಜರಾಗಿದ್ದರು. ಆ ಬಗ್ಗೆ ಸ್ಪಷ್ಟನೆ ನೀಡಿದ ಅಣ್ಣಾ ತಾನು ಗೈರು ಹಾಜರಾಗಲು ತಮ್ಮ ಸಹಚರ ಸಂತೋಷ್ ಭಾರತೀಯ ಅವರೇ ಕಾರಣ ಎಂದು ಹೇಳಿದ್ದಾರೆ.
ಮಮತಾ ಅವರ ರ್ಯಾಲಿಗೆ ಅಣ್ಣಾ ಗೈರು ಹಾಜರಾಗಿರುವುದರಿಂದ ರಾಮಲೀಲಾ ಮೈದಾನದಲ್ಲಿ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರ ಸಂಖ್ಯೆಯೂ ಕಡಿಮೆಯಾಗಿತ್ತು. ಆದ್ದರಿಂದ ಪ್ರಸ್ತುತ ರ್ಯಾಲಿ ಫ್ಲಾಪ್ ಎಂದೇ ಬಿಂಬಿಸಲಾಗಿತ್ತು.
ಆದಾಗ್ಯೂ, ಮಮತಾ- ಅಣ್ಣ ಜಂಟಿ ರ್ಯಾಲಿ ಪ್ರಚಾರದ ರೀತಿ ಬಗ್ಗೆ ಅಣ್ಣಾ ಅಸಮಧಾನಗೊಂಡಿದ್ದರು. ಆದ್ದರಿಂದಲೇ ಅವರು ರ್ಯಾಲಿಗೆ ಗೈರು ಹಾಜರಾಗಿದ್ದರು ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಪ್ರಧಾನಿ ಹುದ್ದೆಗೆ ಮಮತಾ ಅವರನ್ನು ಬೆಂಬಲಿಸಿದ ಅಣ್ಣಾ, ತಾನು ಕೇಳಿದ 17 ಪ್ರಶ್ನೆಗಳಿಗೆ ಉತ್ತರಿಸಿದ ಏಕೈಕ ನಾಯಕಿ ಅವರೇ ಎಂದು ಹೇಳಿದ್ದರು.