ಮಾಧ್ಯಮ ಮೋದಿಗೆ ಮಾರಿಕೊಂಡಿದೆ, ಅಂಥವರನ್ನು ಜೈಲಿಗೆ ಕಳಿಸುತ್ತೇವೆ: ಕೇಜ್ರಿವಾಲ್
ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ಮಾಧ್ಯಮದ ಮೇಲೆ ದಾಳಿ ಮಾಡಿದ್ದು,.
ನಾಗ್ಪುರ್: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಮತ್ತೊಮ್ಮೆ ಮಾಧ್ಯಮದ ಮೇಲೆ ದಾಳಿ ಮಾಡಿದ್ದು, ಮಾಧ್ಯಮಗಳು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪರವಾಗಿ ಪ್ರಚಾರ ಮಾಡಲು, ಅವರಿಂದ ಹಣ ಪಡೆದಿವೆ ಎಂದು ಆರೋಪಿಸಿದ್ದಾರೆ.
ಪಕ್ಷದ ಹಣ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್, ಮಾಧ್ಯಮಗಳು ತಮ್ಮನ್ನು ತಾವು ಮೋದಿಗೆ ಮಾರಾಟ ಮಾಡಿಕೊಂಡಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಂಥವರನ್ನು ಜೈಲಿಗೆ ಕಳುಹಿಸುವುದಾಗಿ ಗುಡುಗಿದ್ದಾರೆ.
ಕಳೆದ ಒಂದು ವರ್ಷದಿಂದ ಮಾಧ್ಯಮಗಳು ಮೋದಿ, ಮೋದಿ... ಮೋದಿ ಅಂತ ನಮ್ಮ ತಲೆಯಲ್ಲಿ ತುಂಬುತ್ತಿವೆ. ಕೆಲವು ಟಿವಿ ವಾಹಿನಿಗಳಂತು, ಭ್ರಷ್ಟಾಚಾರವೇ ಇಲ್ಲ, ಇನ್ನುಮುಂದೆ ರಾಮರಾಜ್ಯ ಬರುತ್ತಿದೆ. ಅದು ಹಾಗೆ, ಇದು ಹೀಗೆ ಎಂದು ಹೇಳುತ್ತಿವೆ. ಇದಕ್ಕೆಲ್ಲ ದುಡ್ಡು ಕಾರಣ. ಮೋದಿ ತನ್ನನ್ನು ತಾನು ಬಿಂಬಿಸಿಕೊಳ್ಳಲು ಅವರಿಗೆ ಸಿಕ್ಕಾಪಟ್ಟೆ ದುಡ್ಡು ಕೊಟ್ಟಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಗುಜರಾತ್ನಲ್ಲಿ 800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಯಾರೂ ಹೇಳುತ್ತಿಲ್ಲ. ಅದಾನಿ ಕೇವಲ 1 ರುಪಾಯಿಗೆ ಭೂಮಿ ಖರೀದಿಸಿದ್ದಾರೆ. ಇದನ್ನು ಯಾವ ಸುದ್ದಿವಾಹಿನಿಯೂ ಹೇಳುತ್ತಿಲ್ಲ. ಅರವಿಂದ್ ಕೇಜ್ರಿವಾಲ್ ಭದ್ರತೆ ನಿರಾಕರಿಸಿದ್ದಾರೆ. ಅವರು ಝಡ್, ವೈ ಭದ್ರತೆ ಹೊಂದಿದ್ದಾರೆ ಅಂತೆಲ್ಲ ಸುದ್ದಿ ಮಾಡುತ್ತಾರೆ. ಆದರೆ ಮೋದಿ ಬಗ್ಗೆ ಸತ್ಯ ಹೇಳುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದರು. ಆದರೆ ಬಳಿಕ ಮಾಧ್ಯಮದ ವಿರುದ್ಧದ ತಮ್ಮ ಹೇಳಿಕೆಯನ್ನು ಕೇಜ್ರಿವಾಲ್ ತಳ್ಳಿಹಾಕಿದ್ದಾರೆ.