ಮುಸ್ಲಿಂ ಓಲೈಕೆಗಾಗಿ ರಾಹುಲ್ ಗುಜರಾತ್ ಗಲಭೆಯನ್ನು ಪ್ರಸ್ತಾಪಿಸುತ್ತಿದ್ದಾರೆ: ಬಿಜೆಪಿ
2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆಯಲ್ಲಿ ಮೋದಿ ಕೈವಾಡವಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮುಸ್ಲಿಂರನ್ನು ಓಲೈಸಲು...
ಅಹ್ಮದಾಬಾದ್: 2002ರಲ್ಲಿ ಗುಜರಾತ್ನಲ್ಲಿ ನಡೆದ ಗಲಭೆಯಲ್ಲಿ ಮೋದಿ ಕೈವಾಡವಿದೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಮುಸ್ಲಿಂರನ್ನು ಓಲೈಸಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಕಳೆದ 10 ವರ್ಷದಲ್ಲಿ ಕಾಂಗ್ರೆಸ್ನ ವೈಫಲ್ಯತೆಯ ಬಗ್ಗೆ ಉತ್ತರಕೊಡುವ ಬದಲು ಕಾಂಗ್ರೆಸ್ ನೇತಾರರು ಗುಜರಾತ್ ಗಲಭೆಯನ್ನು ಮತ್ತೆ ಮತ್ತೆ ಪ್ರಸ್ತಾಪಿಸುವ ಮೂಲಕ ಮುಸ್ಲಿಮರ ಮತ ಗಿಟ್ಟಿಸಲು ಯತ್ನಿಸುತಿದೆ ಎಂದು ಗುಜರಾತ್ ಬಿಜೆಪಿ ಮಾಧ್ಯಮ ನಿರ್ವಾಹಕ ಹರ್ಷದ್ ಪಟೇಲ್ ಹೇಳಿದ್ದಾರೆ.
ಪಿಟಿಐಗೆ ಇಂದು ನೀಡಿದ ಸಂದರ್ಶನದಲ್ಲಿ ರಾಹುಲ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು.
2002ರ ಗುಜರಾತ್ ಗಲಭೆಯ ವೇಳೆ ಗುಜರಾತ್ ಸರ್ಕಾರ ಕ್ಷಮಿಸಲನರ್ಹವಾದ ವೈಫಲ್ಯ ತೋರಿದೆ. ಅನೇಕ ತಜ್ಞರು ಎಸ್ಐಟಿ ವರದಿಯನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಎಸ್ಐಟಿಯ ಕಾರ್ಯವಿಧಾನದಲ್ಲಿನ ಅನೇಕ ನ್ಯೂನತೆಗಳನ್ನು ಎತ್ತಿ ತೋರಿಸಲಾಗಿದೆ. ಕೆಳ ಹಂತದ ನ್ಯಾಯಾಲಯಗಳು ಎಸ್ಐಟಿಯ ದೋಷಪೂರಿತ ವರದಿಯನ್ನಿಟ್ಟುಕೊಂಡು ತೀರ್ಪುಕೊಟ್ಟಿದೆ. ಉನ್ನತ ನ್ಯಾಯಾಲಯಗಳಲ್ಲಿ ಅದರ ಬಗ್ಗೆ ಇನ್ನೂ ಪರಾಮರ್ಶೆಯಾಗಬೇಕಾಗಿದೆ. 2002ರ ಗಲಭೆಗಳಲ್ಲಿ ಮೋದಿಯವರ ಹೊಣೆಗಾರಿಕೆಯ ಬಗ್ಗೆ ಸಮರ್ಪಕವಾಗಿ ತನಿಖೆಯಾಗಬೇಕಿದೆ. ಅವರಿಗೆ ಕ್ಲೀನ್ಚಿಟ್ ಕೊಡಲಾಗಿದೆ ಎನ್ನುವ ಮಾತು ಅವರಿಗೆ ರಾಜಕೀಯವಾಗಿ ಸಮಯೋಜಿಚವಾಗಿರಬಹುದೇ ವಿನಾ ಆತುರದ ನಿರ್ಣಯವಾಗುತ್ತದೆ ಎಂದು ಹೇಳಿದ್ದರು.
ರಾಹುಲ್ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪಟೇಲ್, ಕಾಂಗ್ರೆಸ್ ಪಕ್ಷ ಎಸ್ಐಟಿಯ ವಿಶ್ವಾಸರ್ಹತೆಯನ್ನೇ ಪ್ರಶ್ನಿಸುತ್ತಿದೆ. ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಕಾಂಗ್ರೆಸ್ ಇದೀಗ ಕೋಮುವಾದದ ರಾಜಕಾರಣವನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ.
ಅದೇ ವೇಳೆ ಕಾಂಗ್ರೆಸ್ ನಾಯಕರು ಕೂಡಾ ಈ ಗಲಭೆಯಲ್ಲಿ ಭಾಗಿಯಾಗಿದ್ದರು. ರಾಹುಲ್ ಇನ್ನೊಬ್ಬರತ್ತ ಬೆರಳು ತೋರಿಸಿ ಬೊಟ್ಟು ಮಾಡುವ ಮುನ್ನ ತಮ್ಮ ಪಕ್ಷದ ನಾಯಕರ ಬಗ್ಗೆ ಅರಿತುಕೊಳ್ಳಲಿ ಎಂದು ಪಟೇಲ್ ಹೇಳಿದ್ದಾರೆ.