ರಾಜ್ಯದಲ್ಲಿ ಏನೇ ಆದರೂ ಅದಕ್ಕೆ ಮುಖ್ಯಮಂತ್ರಿಯೇ ಹೊಣೆ: ಪವಾರ್
ರಾಜ್ಯದಲ್ಲಿ ಆಗುವ ಎಲ್ಲ ರೀತಿಯ ಗಲಭೆಗಳಿಗೆ ನೇರವಾಗಿ ಆ ರಾಜ್ಯದ ಮುಖ್ಯಮಂತ್ರಿಯೇ ಹೊಣೆಗಾರರಾಗುತ್ತಾರೆ..
ನವದೆಹಲಿ: ರಾಜ್ಯದಲ್ಲಿ ಆಗುವ ಎಲ್ಲ ರೀತಿಯ ಗಲಭೆಗಳಿಗೆ ನೇರವಾಗಿ ಆ ರಾಜ್ಯದ ಮುಖ್ಯಮಂತ್ರಿಯೇ ಹೊಣೆಗಾರರಾಗುತ್ತಾರೆ ಎಂದು ಎನ್‌ಸಿಪಿ ಮುಖ್ಯಸ್ಥ, ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರು ಸೋಮವಾರ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, 2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಗುಜರಾತ್ ಮುಖ್ಯಮಂತ್ರಿ ಹಾಗೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೊಣೆಗಾರರೇ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪವಾರ್, 'ನಾನು ಒಬ್ಬ ಮುಖ್ಯಮಂತ್ರಿಯಾಗಿದ್ದು, ನನ್ನ ರಾಜ್ಯದಲ್ಲಿ ಯಾವುದಾದರು ಗಲಭೆ ನಡೆದರೆ ಅದರ ಸಂಪೂರ್ಣ ಜವಾಬ್ದಾರಿಯನ್ನು ನಾನೇ ತೆಗೆದುಕೊಳ್ಳಬೇಕು. ಇಲ್ಲ ಅಂತ ಹೇಳಲು ಬರುವುದಿಲ್ಲ. ನಾನು ನೇರವಾಗಿ ಆ ಘಟನೆಯಲ್ಲಿ ಭಾಗಿಯಾಗಿರುವುದಿಲ್ಲ. ಆದರೆ ಒಬ್ಬ ಮುಖ್ಯಮಂತ್ರಿಯಾಗಿ, ಗೃಹ ಸಚಿವನಾಗಿ ಅಥವಾ ಒಬ್ಬ ಆಡಳಿತಗಾರನಾಗಿ ರಾಜ್ಯದ ಜನರ ಹಿತ ಕಾಪಾಡುವುದು ನನ್ನ ಜವಾಬ್ದಾರಿ' ಎಂದಿದ್ದಾರೆ.
ಈ ಮುಂಚೆ ಪವಾರ್ ಅವರು, ಈಗಾಗಲೇ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಮೋದಿಗೆ ಕೋರ್ಟ್ ಕ್ಲಿನ್‌ಚಿಟ್ ನೀಡಿದೆ. ಇನ್ನುಮುಂದಾದರೂ ನಾವು ನ್ಯಾಯಲಯದ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದರು.
ಗುಜರಾತ್ ಅಭಿವೃದ್ಧಿಗೆ ಒಬ್ಬ ಮುಖ್ಯಮಂತ್ರಿ ಕಾರಣ ಅಲ್ಲ. ಗುಜರಾತ್ ಮತ್ತು ಮಹಾರಾಷ್ಟ್ರ ಎರಡು ಅಭಿವೃದ್ಧಿ ಹೊಂದಿದ ರಾಜ್ಯಗಳಾಗಿದ್ದು, ಇದಕ್ಕೆ ಒಬ್ಬ ಮುಖ್ಯಮಂತ್ರಿಯ ಕೊಡುಗೆ ಮಾತ್ರ ಅಲ್ಲ. ಹಲವು ಮುಖ್ಯಮಂತ್ರಿಗಳ ಕೊಡುಗೆ ಇದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.