1962ರ ಚೀನಾ ಯುದ್ಧವನ್ನು ತಪ್ಪಿಸುವಲ್ಲಿ ನೆಹರೂ ವಿಫಲ
1962ರ ಚೀನಾದೊಂದಿಗಿನ ಯುದ್ಥಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ವೈಯಕ್ತಿಕವಾಗಿ...
ನವದೆಹಲಿ: 1962ರ ಚೀನಾದೊಂದಿಗಿನ ಯುದ್ಥಕ್ಕೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ವೈಯಕ್ತಿಕವಾಗಿ ಹೊಣೆಗಾರರಾಗಿದ್ದಾರೆ. ಅಲ್ಲದೆ ಯುದ್ಧವನ್ನು ತಪ್ಪಿಸಲು ಕೂಡ ನೆಹರೂ ವಿಫಲರಾದರು ಎಂಬ ವರದಿಯು ರಾಜಕೀಯ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
1962ರ ಚೀನಾ ನಡುವಿನ ಯುದ್ಥಕ್ಕೆ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಾರಣ ಎಂಬ ಆಂಡರ್ಸೆನ್ ಬ್ರೂಕ್ಸ್ ವರದಿಯ ಆಯ್ದ ಭಾಗ ಅಂತರ್ಜಾಲದಲ್ಲಿ ಬಿಡುಗಡೆಗೊಂಡಿದ್ದು, ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ.
ಚೀನಾದೊಂದಿಗೆ 1962ರ ಯುದ್ಧವನ್ನು ದಯನೀಯವಾಗಿ ಸೋತಿದ್ದ ಭಾರತದ ವ್ಯೂಹಾತ್ಮಕ ತಂತ್ರಗಾರಿಕೆ ಹಾಗೂ ಯುದ್ಧ ಸನ್ನದ್ಥತೆಯನ್ನು ಆಂಡರ್ಸನ್ ಬ್ರೂಕ್ಸ್ ವರ್ಗೀಕೃತ ವರದಿಯನ್ನು ಆಸ್ಟ್ರೇಲಿಯಾ ಪತ್ರಕರ್ತ ಮ್ಯಾಕ್ಸ್ವೆಲ್ ಅವರು ಅಂತರ್ಜಾಲದಲ್ಲಿ ಹಾಕಿದ್ದಾರೆ.
ಭಾರತ-ಚೀನಾ ಯುದ್ಧದ ಸಮಯದಲ್ಲಿ ಮ್ಯಾಕ್ಸ್‌ವೆಲ್ ಅವರು ದಿಲ್ಲಿಯ ಹೊರಗೆ ಕಾರ್ಯನಿರತರಾಗಿದ್ದರು. ಚೀನಾದ ಸೇನೆಯ ವಿರುದ್ಧ ಹೋರಾಡುವುದಕ್ಕೆ ಭಾರತೀಯ ಸೇನೆಗೆ ಯಾವ ಸ್ಥಿತಿಯಲ್ಲಿ ಮತ್ತು ಯಾವ ರೀತಿಯಲ್ಲಿ ಆದೇಶ ನೀಡಲಾಗಿತ್ತು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.
ಈ ವರ್ಗೀಕೃತ ವರದಿಯನ್ನು ಲೆ| ಜ| ಆಂಡರ್‌ಸನ್ ಬ್ರೂಕ್ಸ್ ಅವರು ಆಗಿನ ಭಾರತೀಯ ಮಿಲಿಟರಿ ಅಕಾಡೆಮಿಯ ಕಮಾಂಡೆಂಟ್ ಆಗಿದ್ದ ಬ್ರಿಗೇಡಿಯರ್ ಪಿ ಎಸ್ ಭಗತ್ ಅವರ ಜತೆಗೂಡಿ ಸಿದ್ಧಪಡಿಸಿದ್ದಾರೆ. ಭಾರತ - ಚೀನ ಯುದ್ಧಕ್ಕೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ವೈಯಕ್ತಿಕವಾಗಿ ಹೊಣೆಗಾರರು ಎಂಬುದನ್ನು ವರದಿಯು ಹೇಳುತ್ತದೆ.