ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿ, 15 ಸಾವು
ಅಘ್ಫಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದಂತೆಯೇ ಉಗ್ರರು ಅಟ್ಟಹಾಸ ಮೆರೆದಿದ್ದು, ಇಂದು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ...
ಕಾಬೂಲ್: ಅಘ್ಫಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದಂತೆಯೇ ಉಗ್ರರು ಅಟ್ಟಹಾಸ ಮೆರೆದಿದ್ದು, ಇಂದು ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಗೆ ಸುಮಾರು 15 ಮಂದಿ ಮೃತಪಟ್ಟಿದ್ದಾರೆ.
ಇಂದು ಬೆಳಗ್ಗೆ ಉತ್ತರ ಅಘ್ಫಾನಿಸ್ತಾನದ ಮಾರುಕಟ್ಟೆಯೊಂದರ ಚೆಕ್‌ಪೋಸ್ಟ್ ಹೊರಗೆ ಉಗ್ರರು ಆತ್ಮಹುತಿ ಬಾಂಬ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಸುಮಾರು 15 ಮಂದಿ ಅಸುನೀಗಿದ್ದು, 46 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಟೋರಿಕ್ಷಾವೊಂದನ್ನು ಚಲಾಯಿಸಿಕೊಂಡು ಬಂದ ಆತ್ಮಹತ್ಯೆ ದಾಳಿಕೋರನೊಬ್ಬ ಮಾರುಕಟ್ಟೆಯ ಚೆಕ್‌ಪೋಸ್ಟ್ ಹೊರಗೆ ಸ್ಫೋಟಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಫರ್ಯಾಬ್ ಪ್ರಾಂತ್ಯದಲ್ಲಿ ನಡೆದ ದಾಳಿಯ ಹೊಣೆಗಾರಿಕೆಯನ್ನು ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ಒಪ್ಪಿಕೊಂಡಿಲ್ಲ. ಆದರೆ ಈ ಪ್ರಾಂತ್ಯದಲ್ಲಿ ತಾಲಿಬಾನಿ ಉಗ್ರರ ಪ್ರಾಬಲ್ಯ ಹೆಚ್ಚಾಗಿದೆ ಎನ್ನಲಾಗಿವೆ.
ಏಪ್ರಿಲ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಮತದಾನ ಪ್ರಕ್ರಿಯೆಯನ್ನು ಹಾಳುಗೆಡುಹುದಾಗಿ ತಾಲಿಬಾನಿ ಉಗ್ರರು ಈಗಾಗಲೇ ಬೆದರಿಕೆಯೊಡ್ಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉಪ ರಾಜ್ಯಪಾಲ ಅಬ್ದುಲ್ ಸತಾರ್ ಬರೇಝ್ ಆತ್ಮಾಹುತಿ ದಾಳಿಯಲ್ಲಿ ಸುಮಾರು 15 ಮಂದಿ ಸಾವನ್ನಪ್ಪಿದ್ದು, ಸುಮಾರು 46 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಸುಮಾರು 27 ಮಂದಿಯ ಪರಿಸ್ಥಿತಿ ಗಂಭೀರವಾಗಿದೆ ಎಂದರು.