ನಾಪತ್ತೆಯಾದ ಮಲೇಷ್ಯಾ ವಿಮಾನದ ಬಿಡಿ ಭಾಗಗಳು ಪತ್ತೆ?
ಕೌಲಾಲಂಪುರ: ಕಳೆದ 12 ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಬಿಡಿ ಭಾಗಗಳು ಪತ್ತೆಯಾಗಿವೆ ಎಂದು ಗುರುವಾರ ಆಸ್ಟ್ರೇಲಿಯಾ ಪ್ರಧಾನಿಮಂತ್ರಿ ಹೇಳಿದ್ದಾರೆ.
ಹಿಂದು ಮಹಾಸಾಗರದಲ್ಲಿ ವಿಮಾನದ ಎರಡು ಬಿಡಿ ಭಾಗಗಳನ್ನು ಉಪಗ್ರಹ ಪತ್ತೆ ಹಚ್ಚಿದ್ದು, ಅದು ನಾಪತ್ತೆಯಾಗಿರುವ ಎಂಎಚ್ 370 ವಿಮಾನದ್ದೇ ಆಗಿರುವ ಸಾಧ್ಯತೆ ಇದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬ್ಬೋಟ್ ಅವರು ಕ್ಯಾನ್ಬೆರಾದಲ್ಲಿ ಆಸ್ಟ್ರೇಲಿಯಾ ಸಂಸತ್ತಿಗೆ ತಿಳಿಸಿದ್ದಾರೆ. ಹೆಚ್ಚಿನ ಶೋಧಕ್ಕಾಗಿ ಮತ್ತೆ ಮೂರು ಹೆಲಿಕಾಪ್ಟರ್ಗಳನ್ನು ಕಳುಹಿಸುವುದಾಗಿ ಸಹ ಅವರು ಹೇಳಿದ್ದಾರೆ. ಆದರೆ ವಿಮಾನದ ಅವಶೇಷಗಳು ಪತ್ತೆಯಾದ ಸ್ಥಳದ ಬಗ್ಗೆ ಯಾವುದೇ ನಿಖರ ಮಾಹಿತಿ ನೀಡಿಲ್ಲ.
ಆಸ್ಟ್ರೇಲಿಯಾ ಕೂಡ ನಿನ್ನೆಯಿಂದ ವಿಮಾನದ ಶೋಧ ಕಾರ್ಯದಲ್ಲಿ ಕೈಜೋಡಿಸಿದ್ದು, ಪರ್ತ್ನ ನೈರುತ್ಯ ಭಾಗದಲ್ಲಿ 3 ಸಾವಿರ ಕಿ.ಮೀ. ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸುವುದಾಗಿ ತಿಳಿಸಿದೆ.
ಇದೇ ವೇಳೆ, ನಾಪತ್ತೆಯಾಗಿರುವ ವಿಮಾನವು ಹಿಂದೂ ಮಹಾಸಾಗರದ ದಕ್ಷಿಣ ಭಾಗದತ್ತ ಸಂಚರಿಸಿರಬಹುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಪತ್ತೆಯಾಗದೇ ಇದ್ದಲ್ಲಿ?
- ಅದರ ಹೊಣೆಯನ್ನು ಯಾರ ಮೇಲೆ ಹೊರಿಸಬೇಕು ಎಂಬುದೇ ಕೋರ್ಟ್ಗೆ ದೊಡ್ಡ ತಲೆನೋವಾಗಿ ಪರಿಣಮಿಸಬಹುದು. ಅವಶೇಷಗಳು ಸಿಗದ ಕಾರಣ, ಘಟನೆಗೆ ಏರ್ಲೈನ್ಸ್ ಕಾರಣವೇ, ವಿಮಾನದ ತಯಾರಕರು ಕಾರಣರೇ ಅಥವಾ ಬೇರ್ಯಾರಾದರೂ ಹೊಣೆಯೇ ಎಂಬುದನ್ನು ನಿರ್ಧರಿಸುವುದೇ ಕಷ್ಟವಾಗಬಹುದು.
- ವಿಮಾನಗಳ ಮೇಲೆ ನಿಗಾ ಇಡುವ ವ್ಯವಸ್ಥೆ ಸುಧಾರಿಸಬೇಕೆಂದು ಸರ್ಕಾರಗಳು ಹಾಗೂ ವಿಮಾನಯಾನ ಸಂಸ್ಥೆಗಳ ಮೇಲೆ ಒತ್ತಡ ಹೆಚ್ಚಾಗಬಹುದು.