ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಪತ್ರಿಕೋದ್ಯಮ ಅಂದು ಇಂದು

ಪತ್ರಿಕೋದ್ಯಮ ಅಂದು ಇಂದು: ಖುಷ್ವಂತ್ ಸಿಂಗ್‌ರ ಪುಸ್ತಕ'ಲೆಸನ್ಸ್ ಆಫ್ ಮೈ ಲೈಫ್‌'

Lingaraj Badiger
Updated On : 20 Mar 2014, 2:11 am

ಖುಷ್ವಂತ್ ಸಿಂಗ್‌ರ ಪುಸ್ತಕ'ಲೆಸನ್ಸ್ ಆಫ್ ಮೈ ಲೈಫ್‌' ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದಾರೆ ಲೇಖಕ ಎಂ.ಎಸ್. ರುದ್ರೇಶ್ವರಸ್ವಾಮಿ.ಅದರ ಆಯ್ದ ಭಾಗ ಇಲ್ಲಿದೆ.

ನಾನು ತುಲನಾತ್ಮಕ ಧರ್ಮಗಳು ಮತ್ತು ಸಮಕಾಲೀನ ಭಾರತ ಕುರಿತು ಅಮೆರಿಕಾದಲ್ಲಿ ನಾನು ಬೋಧಿಸುತ್ತಿದ್ದ ಸಮಯದಲ್ಲೇ 'ಇಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'ದ ಸಂಪಾದಕನಾಗಿ ಕೆಲಸ ಮಾಡಲು ಬಂದ ಕರೆಯನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದೆ. ಅದು 1969ರಲ್ಲಿ ಮತ್ತು ಆ ಕೆಲಸ ಇದ್ದದ್ದು ಬಾಂಬೆಯಲ್ಲಿ. ಆ ಸಮಯದಲ್ಲಿ, 'ಇಲಸ್ಟ್ರೇಟೆಡ್‌ವೀಕ್ಲಿ' ತರಹದ ಬೇರೊಂದು ಮ್ಯಾಗಝಿನ್ ಇರಲಿಲ್ಲ ಮತ್ತು ನಾನು ಪತ್ರಕರ್ತನಾಗಿ ಒಂದು ಕೈ-ನೋಡಬೇಕು ಎಂದಿದ್ದೆ. ಅದಕ್ಕಿಂತಲೂ ಮುಂಚೆ, ನಾನು ಆಕಾಶವಾಣಿಯಲ್ಲಿ ಮತ್ತು ಸರಕಾರ ತರುತ್ತಿದ್ದ 'ಯೋಜನ' ಮ್ಯಾಗಝಿನ್‌ಗಾಗಿ ಕೆಲಸ ಮಾಡಿದ್ದೆ. ಇದಲ್ಲದೆ ನಿಯತವಾಗಿ ವಿದೇಶಿ ಪತ್ರಿಕೆಗಳಿಗೆ ಬರೆಯುತ್ತಿದ್ದೆ. ಅವುಗಳಲ್ಲಿ 'ನ್ಯೂಯಾರ್ಕ್ ಟೈಮ್ಸ್‌' ಪತ್ರಿಕೆ ಕೂಡ ಒಂದು. ಭಾರತೀಯ ಪತ್ರಿಕೆಗಳ 'ಮಧ್ಯದ' ಪುಟಕ್ಕೂ ನಿಯತವಾಗಿ ಬರೆಯುತ್ತಿದ್ದೆ. ಇವುಗಳಲ್ಲಿ ಸ್ಟೇಟ್ಸ್ ಮ್ಯಾನ್ ಮತ್ತು 'ಟೈಮ್ಸ್ ಆಫ್ ಇಂಡಿಯಾ' ಸೇರಿದ್ದವು. ಹೀಗಾಗಿ, ನನ್ನ ಹಾದಿ ಜನರಿಗೆ ಅಪರಿಚತವೇನೂ ಆಗಿರಲಿಲ್ಲ. ನನಗೆ ಅನ್ನಿಸಿದ್ದನ್ನು, ನಾನು ಅವಲೋಕಿಸಿದ್ದನ್ನು, ನಾನು ನೋಡಿದ್ದನ್ನು ಮತ್ತು ಗಮನಿಸಿದ್ದನ್ನು ನಾನು ಬರೆದೆ. ನಾನು ಸಿಕ್ಕಾಪಟ್ಟೆ ತಿರುಗಾಡುತ್ತಿದ್ದೆ, ಪ್ರಯಾಣ ಮಾಡುತ್ತಿದ್ದೆ, ಆದ್ದರಿಂದ ಬರೆಯುವುದಕ್ಕೆ ಸಾಕಷ್ಟು ಇರುತ್ತಿತ್ತು ನನ್ನಲ್ಲಿ.

ಆ ಸಂಧರ್ಭದಲ್ಲಿ ನನಗೆ 'ಇಲಸ್ಟ್ರೇಟೆಡ್ ವೀಕ್ಲಿ' ಜಯಬೇರಿ ಹೊಡೆಯುವಂತೆ ಮಾಡಲು ಸಾಧ್ಯವಾಯಿತು. ಏಕೆಂದರೆ ನನ್ನ ಹೆಗಲ ಮೇಲೆ ಯಾವುದೇ ಬೇರೆ ಹೊರೆ ಆಗ ಇರಲಿಲ್ಲ. ನಾನಲ್ಲಿಗೆ ಬಂದಾಗ ಒರಸಿದ ಕಪ್ಪುಹಲಗೆಯಂತಿದ್ದೆ. ನನಗೆ ಸ್ಪಷ್ಟತೆಯಿತ್ತು, ನಾನು ಮಾಡಬೇಕಾದದ್ದು ಏನೆಂಬುದರ ಬಗ್ಗೆ. ನಾನು ಪತ್ರಿಕೋದ್ಯಮ ಮತ್ತು ಸಾಹಿತ್ಯ- ಇವೆರಡರ ನಡುವೆ ಎಂದೂ ವ್ಯತ್ಯಾಸ ಕಾಣಲಿಲ್ಲ, ಅವು ಭಿನ್ನವೆಂದು ನನಗನ್ನಿಸಲೂ ಇಲ್ಲ. ಅವೆರಡೂ ಇರುವುದು ನಿವೇದಿಸುವುದಕ್ಕಾಗಿ, ತಿಳಿಸುವುದಕ್ಕಾಗಿ ಎನ್ನುವುದು ನನ್ನ ಖಚಿತ ಅಭಿಪ್ರಾಯಆಗಿತ್ತು. ರಾಜಕೀಯದ ಬಗ್ಗೆ ಬರೆಯುವುದಕ್ಕೆ ನನಗೇನೂ ಸಮಸ್ಯೆಯಿರಲಿಲ್ಲ, ಏಕೆಂದರೆ ನನಗೆ ನನ್ನದೇ ಆದ ಅಭಿಪ್ರಾಯಗಳಿದ್ದವು ಮತ್ತು ಅವುಗಳನ್ನು ತೇಲಿಬಿಡುವುದಕ್ಕೆ ನನಗಾವ ಭಯವೂ ಇರಲಿಲ್ಲ.

ತ್ರಿಶೂಲ ಸೂತ್ರ
ನನಗೆ ನನ್ನ ಮೇಲೆ ಪೂರ್ಣ ವಿಶ್ವಾಸ ಮತ್ತು ನಂಬಿಕೆ. ನನ್ನ ಮೂರು ತ್ರಿಶೂಲ ಸೂತ್ರಗಳ ಬಗ್ಗೆಯೂ (ತಿಳಿಸು, ರಂಜಿಸು, ಪ್ರಚೋದಿಸು). ಏಕೆಂದರೆ ಅಮೆರಿಕಾದಲ್ಲಿನ ನನ್ನ ಬೋಧನೆಯ ಮಿತಿ ಭಾರತದ ಜನರ ಬಗ್ಗೆ ನನಗಿರುವ ಅತ್ಯಲ್ಪ ಜ್ಞಾನವನ್ನು ನನಗೆ ತೋರಿಸಿಕೊಟ್ಟಿತ್ತು. ಜಾತಿ, ಪಂಗಡ ಮತ್ತು ಸಮುದಾಯಗಳ ಬಗ್ಗೆ ನಾನು ಓದಿ ಸಾಕಷ್ಟು ತಿಳಿದುಕೊಂಡಿದ್ದೆ. ಇದು ಆಗ ನನಗೆ ಕೈಗೆ ಬಂತು. ನಾನು ಅದೃಷ್ಟಶಾಲಿಯಾಗಿದ್ದೆ. ನನಗಾವ ಯಜಮಾನನೂ ನನ್ನ ತಲೆ ಮೇಲೆ ಕೂತಿರಲಿಲ್ಲ. ಆದ್ದರಿಂದ ನನಗೆ ಸ್ವಾತಂತ್ರ್ಯವಿತ್ತು. ಭಾರತದ ಜನರ ಮೇಲೆ ನಾವು ಒಂದು ಮಾಲಿಕೆ ಶುರು ಮಾಡಿದೆವು ಬೇರೆ ಬೇರೆ ಸಮುದಾಯಗಳಿಗೆ ಸೇರಿದವರ ಬಗ್ಗೆ. ಆನಂತರ, 'ನಾನು ನಂಬುತ್ತೇನೆ' ಎನ್ನುವ ಹೆಸರಿನಲ್ಲಿ ಪ್ರಖ್ಯಾತ ವ್ಯಕ್ತಿಗಳಿಂದ ಬೇರೆ ಬೇರೆ ವಿಷಯಗಳ ಬಗ್ಗೆ ಮಾತುಕತೆ ದೇವರು, ಲಂಚ, ಹಣೆಬರಹ, ಧರ್ಮ ಮತ್ತು ಇನ್ನಿತರೆ ವಿಷಯಗಳ ಬಗ್ಗೆ. 

ಸಿಮಿ ಗರೆವಾಲ್ ತುಂಡುಬಟ್ಟೆ
ನಮ್ಮಲ್ಲಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳಿದ್ದವು ಮತ್ತು ವಿಶಿಷ್ಟ ಬರಹಗಳು. ಉದಾಹರಣೆಗೆ, ಜೈನ ಮಹಾವೀರರ ಜನ್ಮ ದಿನಾಚರಣೆ. ಹಲವು ರಾಜ್ಯಗಳ ಮುಖ್ಯಮಂತ್ರಿಗಳಿಗೆ ನಾನು ಬಹಿರಂಗ ಪತ್ರ ಬರೆದು ಹೇಳಿದೆ. 'ಕೇವಲ ಅವರ ಜನ್ಮ ದಿನಾಚರಣೆ ಆಚರಿಸಿ, ಗೌರವ ಸಲ್ಲಿಸಿದರೆ ಸಾಲದು, ನೀವು ಅವರು ಬೋಧಿಸಿದ್ದನ್ನು ಆಚರಣೆಯಲ್ಲಿ ತರಬೇಕು. ಏನಾದರೂ ರಚನಾತ್ಮಕ ಗಟ್ಟಿ ಕೆಲಸಗಳನ್ನು ಮಾಡಬೇಕೆಂದು.' ಅವರೇನಾದರೂ ಹಾಗೆ ಮಾಡುವುದಕ್ಕೆ ಒಲವು ತೋರಿದರೆ, ಅದಕ್ಕೆ ಬೇಕಾದ ಎಲ್ಲ ಪ್ರಚಾರವನ್ನು ನಾನು ಕೊಡುವುದಾಗಿ ಅವರಿಗೆ ಭರವಸೆ ನೀಡಿದೆ. ಅತ್ಯುತ್ತಮ ಪ್ರತಿಕ್ರಿಯೆಗಳು ಬಂದವು. ಅವರಲ್ಲಿ ಹಲವರು, ತಮ್ಮ ರಾಜ್ಯಗಳಲ್ಲಿ ಕಾಡು ಪ್ರಾಣಿಗಳ ಶಿಕಾರಿಯನ್ನು ನಿಷೇಧಿಸಿದರು. ನಾವು ಅದರ ಬಗ್ಗೆ ಮ್ಯಾಗಝಿನ್ನಲ್ಲಿ ಬರೆದೆವು. ಪ್ರಚೋದನಾಕಾರಿ ಚಿತ್ರಗಳನ್ನು ಪ್ರಕಟಿಸಿದೆವು, ವಿವರವಾದ ತಲೆಬರಹದಡಿ. ಅದು ಚಿತ್ರಗಳನ್ನು ಸಕ್ರಮಗೊಳಿಸಿತು. ಸಿಮಿ ಗೆರೆವಾಲ್ ತುಂಡು ಬಟ್ಟೆ ತೊಟ್ಟ ಸಿದ್ಧಾರ್ಥ ಚಿತ್ರದ ಒಂದು ಸ್ತಬ್ದ ಚಿತ್ರ, ಒಬ್ಬ ಗಿರಿಜನ ಹುಡುಗಿ ತನ್ನ ಜನಾಂಗ ಕುರಿತ ವಿವರಣೆಯೊಂದಿಗೆ. ಅದು ಆ ರೀತಿಯಲ್ಲಿ. ಪ್ರಸಾರ ಸಂಖ್ಯೆ ಮೇಲಕ್ಕೇರಿತು. ಅಲ್ಲಿಂದ ಮುಂದೆ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.

ಯೋಗ್ಯವಿಲ್ಲದ ಪತ್ರಿಕೆಗಳು!
ನನ್ನ ಕಾಲದಲ್ಲಿ, ಸಂಪಾದಕನೊಬ್ಬ ತನ್ನ ಪತ್ರಿಕೆಗೆ, ನಿಯತಕಾಲಕ್ಕೆ ತಾನೇ ಯಜಮಾನ. ಈಗ ಭಾರತದಾದ್ಯಂತ ಪ್ರಸಾರವುಳ್ಳ ಪತ್ರಿಕೆಗಳಿವೆ. ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್ ಇತ್ಯಾದಿ. ಆದರೆ ನನಗೆ ಅವುಗಳ ಸಂಪಾದಕರ ಹೆಸರು ಗೊತ್ತಿಲ್ಲ, ಏಕೆಂದರೆ ಈಗ ಸಂಪಾದಕ ಪತ್ರಿಕೆ ನಡೆಸುತ್ತಿಲ್ಲ. ಅದನ್ನು ನಡೆಸುತ್ತಿರುವುದು ಮಾಲಿಕ ಇಲ್ಲವೆ ಮಾಲಿಕನ ಮಕ್ಕಳು. ಪತ್ರಿಕೆಗಳು ಎಷ್ಟು ಸಾಧ್ಯವೋ ಅಷ್ಟೂ ಸುದ್ದಿಯನ್ನು ತಮ್ಮ ಮುಖಪುಟದಲ್ಲಿ ತುರುಕಿ ಬಿಡುತ್ತವೆ. ಅದು ಮುಖಪುಟದಲ್ಲಿ ಪ್ರಕಟಪಡಿಸುವ ಜಾಹೀರಾತು ಲಭ್ಯವಿಲ್ಲದಿದ್ದರೆ ಮಾತ್ರ. ಉಳಿದ ಪುಟಗಳಲ್ಲಿ ಬಾಲಿವುಡ್ ಅಥವಾ ಫ್ಯಾಷನ್ ಡಿಸೈನ್, ವಿದೇಶಿ ಆಹಾರ, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಚಂದದ ಹುಡುಗಿಯರದೇ ಪ್ರಭುತ್ವ. ಎಲ್ಲ ಪತ್ರಿಕೆಗಳತ್ತ ಒಮ್ಮೆ ಕಣ್ಣಾಡಿಸಿ. ನಿಜಕ್ಕೂ ಅವು ಓದಲಿಕ್ಕೆ ಖಂಡಿತಾ ಯೋಗ್ಯವಾಗಿಲ್ಲ.

ಪದಬಂಧವೇ ಬೆಸ್ಟ್
ಈವತ್ತು ಯಾವುದೇ ಒಬ್ಬ ಸಂಪಾದಕನಿಗೆ ದಿನಪತ್ರಿಕೆಯೊಂದನ್ನು ವಿಭಿನ್ನ ರೀತಿಯಲ್ಲಿ ರೂಪಿಸಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸಿಲ್ಲ. ಏಕೆಂದರೆ, ದೇಶದ ವಿವಿಧ ಪ್ರದೇಶಗಳಲ್ಲಿರುವ ವರದಿಗಾರರ ವರದಿಗಳಲ್ಲದೆ, ಪತ್ರಿಕೆಯ ಮಧ್ಯದ ಪುಟದಲ್ಲಿನ ಸಂಪಾದಕೀಯಗಳು ಮತ್ತು ಇತರೆ ಅಂಕಣ ಬರಹಗಳು ಇರುತ್ತವೆ. ಪತ್ರಿಕೆಯ ಅರ್ಧಕ್ಕಿಂತ ಹೆಚ್ಚಿನ ಹೂರಣ ವಿಶಿಷ್ಟವಾದ ಲೇಖನಗಳು ಬರುವುದು ತಂತಿ ಸೇವೆ ಅಥವಾ ವಿದೇಶಿ ಪತ್ರಕರ್ತರ ಪ್ರತಿನಿಧಿ ಮಂಡಲಿಯಿಂದ. ಮೂರನೇ ಪುಟದಲ್ಲಿಇರುವುದು ತಿರುಳಿಲ್ಲದ ವಿಚಾರಗಳ ವರದಿಹಾಗೂ ಫೋಟೋಗಳು. ಹೀಗಿರುವಾಗ, ಸಂಪಾದಕನೊಬ್ಬ ಮಾಡುವುದಾದರೂ ಏನು? ಪ್ರತಿದಿನ ನಾನು 6 ರಿಂದ 8 ಪತ್ರಿಕೆಗಳ ಮೇಲೆ ಕಣ್ಣಾಡಿಸುತ್ತೇನೆ. ಹೆಚ್ಚಿನ ವೇಳೆಯನ್ನು ಪದಬಂಧ ಇತ್ಯಾದಿಗಳ ಬೆಡಗು ಒಡೆಯುವುದರಲ್ಲಿಯೇ ಕಳೆಯುತ್ತೇನೆ. ಏಕೆಂದರೆ ಈಗಿನ ಪತ್ರಿಕೆಯಲ್ಲಿ ನನಗೆ ಅದೇ ಕುತೂಹಲಕಾರಿ ವಸ್ತು.

ಉಪದೇಶಿ ಸಂಪಾದಕರು!
ವಸ್ತುನಿಷ್ಟವಾಗಿ ವಿಷಯಗಳನ್ನು ಮಂಡಿಸುವ ಬದಲು, ಈವತ್ತಿನ ಹೆಚ್ಚಿನ ಸಂಪಾದಕರು ಬರೀ ಉಪದೇಶ ಮಾಡುವುದಕ್ಕೇ ಬಯಸುತ್ತಾರೆ. ಹಲವು ವೇಳೆ ಅವರು ಬರೀ ಆಡಂಬರದಲ್ಲಿ, ತಮ್ಮ ಪಾಂಡಿತ್ಯ ಪ್ರದರ್ಶನದಲ್ಲಿ ತೊಡಗಿಕೊಂಡಿರುತ್ತಾರೆ. ಹೀಗಿರಲಿಲ್ಲ ಹಿಂದೆ. ಫ್ರಾಂಕ್ ಮೊರೇಸ್, ಕಸ್ತೂರಿ ರಂಗ ಅಯ್ಯಂಗಾರ್, ಪೋಥನ್ ಜೋಸೆಫ್ ಮತ್ತು  ಪ್ರೇಮ್ ಭಾಟಿಯಾ ಅಂಥವರು ಓದುಗರ ವಿಶ್ವಾಸ ಗಳಿಸಿದ್ದರು, ನಂಬಲರ್ಹವಾಗಿದ್ದರು. ಎಂಭತ್ತರಲ್ಲಿ, 'ಟೈಮ್ಸ್ ಆಫ್ ಇಂಡಿಯಾ'ದ ಸಂಪಾದಕರಾಗಿದ್ದ ದಿಲೀಪ್ ಪಡ್‌ಗಾಂವ್ಕರ್ ಭಾರತದ ಪ್ರಧಾನ ಮಂತ್ರಿ ಹುದ್ದೆಯ ನಂತರದ ಅತ್ಯುತ್ತಮ ಹುದ್ದೆ ತಮ್ಮದೆಂದು ಹೇಳಿದ್ದರಲ್ಲಿ ಏನೇನೂ ತಪ್ಪಿರಲಿಲ್ಲ. ನಿಜಕ್ಕೂ ಆಡಳಿತ ಪಕ್ಷದ ವಿರುದ್ಧ ರಚನಾತ್ಮಕ ಟೀಕೆ ಬಂದದ್ದು ವಿರೋಧ ಪಕ್ಷದ ವತಿಯಿಂದಲ್ಲ, ಆದರೆ ಅದು ಬಂದದ್ದು ಮುಕ್ತವಾದ ಸಮೂಹ ಮಾಧ್ಯಮಗಳಿಂದ. ಹೊಣೆಯರಿತ ಎಸ್. ಮುಲ್ಗಾಂವ್ಕರ್ ಅಂತಹ ಜನರಿಂದ. ಅವರೊಬ್ಬ ಧೀಮಂತ ಸಂಪಾದಕರಾಗಿದ್ದರು. ಭಾಷೆಯನ್ನು ಅತ್ಯಂತ ಕೌಶಲ್ಯಪೂರ್ಣವಾಗಿ ಬಳಸುತ್ತಿದ್ದರು, ಅದು ತನಗೆ ತಾನೇ ಓದಿಸಿಕೊಳ್ಳುವಂತಿರುತ್ತಿತ್ತು. ಬಿ.ಜಿ. ವರ್ಗೀಸ್ ಅದ್ವಿತೀಯರಾಗಿದ್ದರು. ಅವರು ನೀರಸ ಬರಹಗಾರರಾಗಿದ್ದರೂ, ತುಂಬಾ ಪ್ರಾಮಾಣಿಕರಾಗಿದ್ದರು ಮತ್ತು ನೇರ ನಡವಳಿಕೆಉಳ್ಳವರಾಗಿದ್ದರು.  ಫ್ರಾಂಕ್ ಮೊರೇಸ್ ಅವರದು ಸಮಗ್ರ ಋಜುತ್ವ ಮತ್ತು ಭಾಷೆಯ ಮೇಲೆ ಒಳ್ಳೆಯ ಹಿಡಿತ.

ಟಿವಿ ಪೈಪೋಟಿ
ನಮ್ಮಲ್ಲಿ ಟೆಲಿವಿಷನ್   ಪಾದಾರ್ಪಣೆ ಮಾಡುತ್ತಿದ್ದಂತೆ ನಿಧಾನವಾಗಿ ಎಲ್ಲವೂ ಬದಲಾಗಲು ಆರಂಭವಾಯಿತು. ಅದು ತನ್ನ ತಲುಪುವಿಕೆಯಿಂದಾಗಿಯೇ ಬಹಳ ದೊಡ್ಡ ಸವಾಲೊಡ್ಡಿತು. ನಾವು ಸೋಮಾರಿ ಜನ. ಒಮ್ಮೆ ಏನನ್ನೋ ನೀವು ಟಿವಿಯಲ್ಲಿ ನೋಡಿಯಾದ ಮೇಲೆ ಮತ್ತೆ ಅದನ್ನು ಮರುದಿನದ ಬೆಳಗ್ಗೆ ಪತ್ರಿಕೆಗಳಲ್ಲಿ ಓದಲು ಬಯಸುವುದಿಲ್ಲ. ದಣಿವು ನಿಮ್ಮನ್ನು ಆವರಿಸಿಕೊಳ್ಳಲು ಆರಂಭಿಸುತ್ತದೆ. 24/7 ಟಿವಿ ಸುದ್ದಿ ಚಾನಲ್‌ಗಳು ಶುರುವಾದ ನಂತರ, ಕೆಲವೇ ಕೆಲವು ಜನ ಮಾತ್ರ ಸಂಪಾದಕೀಯಗಳನ್ನು ಓದುವ ಕಾಳಜಿ ತೋರುತ್ತಾರೆ. ಪತ್ರಿಕೆಗಳ ಮಾಲಿಕರು, ಸಂಪಾದಕರನ್ನು ಬಳಸಿ ಬಿಸಾಡುವ ವಸ್ತುಗಳಂತೆ ಬದಲಿಸಬಹುದೆಂದು ಅರ್ಥೈಸಿಕೊಂಡರು. ಟಿವಿ ಮತ್ತು ಇತರೆ ಎಲೆಕ್ಟ್ರಾನಿಕ್‌ಮಾಧ್ಯಮಗಳು ಒಡ್ಡಿದ ಸವಾಲುಗಳನ್ನು ಬೇರೆ ರೀತಿಯಲ್ಲಿ ಎದುರಿಸಬಹುದೆಂದು ಅವರು ಬೇಗನೆ ಕಂಡುಕೊಂಡರು. ಹೀಗಾಗಿಯೇ, ನಮ್ಮ ದಿನಪತ್ರಿಕೆಗಳು ತಮ್ಮ ಪುಟಗಳಲ್ಲಿ ಸಿನೆಮಾ ಗಾಸಿಪ್‌ಗಳು, ಸಾಮಾಜಿಕ ಪಾರ್ಟಿಗಳ ಫೋಟೋ ಸಹಿತ ವರದಿಗಳು ಮತ್ತು ಅಂತವುಗಳಿಂದಲೇ ತುಂಬುತ್ತವೆ.

ಓದಿಸುವುದೇ ಸವಾಲ್!
ಈವತ್ತಿನ ಮುದ್ರಣ ಮಾಧ್ಯಮದ ಎದುರಿರುವ ದೊಡ್ಡ ಸವಾಲು ಎಂದರೆ, ವಿಷಯಗಳನ್ನು ಓದುವಂತೆ ಮಾಡುವುದು. ಅಲ್ಲದೆ ಪ್ರಚಲಿತ ವಿಷಯಗಳು, ರಾಜಕೀಯ, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕುರಿತು. ಹಾಗೆ ಮಾಡಬೇಕಾದರೆ ವಿಷಯವನ್ನು ನೀವು ಅಭ್ಯಾಸ ಮಾಡಬೇಕಾಗುತ್ತದೆ, ನಂತರ ಅದನ್ನು ಭಾಷೆಗಿಳಿಸಬೇಕಾಗುತ್ತದೆ, ಅದು ಓದುಗರಿಗೆ ಅರ್ಥವಾಗುವಂತೆಯೂ ಇರಬೇಕಾಗುತ್ತದೆ. ಆದರೆ ಸಮಸ್ಯೆ ಇರುವುದು, ವಿಶೇಷವಾಗಿ ತಿಳಿದಿರುವ ಜಾಣ ಪತ್ರಕರ್ತರೇ ಕಡಿಮೆಯಾಗುತ್ತಿರುವುದು. ಆದ್ದರಿಂದಲೇ ಅವರು, ವಿಷಯಗಳನ್ನು ಪರಿಣಾಮಕಾರಿಯಾಗಿ ಬರೆಯಲಾಗುತ್ತಿಲ್ಲ. ಯಾವ ಪೂರ್ವಸಿದ್ದತೆಯನ್ನೂ ಅವರು ಮಾಡಿಕೊಳ್ಳುವುದಿಲ್ಲ. ಅವರಿಗೆ ಇದಾವುದರ ಚಿಂತೆಯೂ ಕಾಡುವುದಿಲ್ಲ. ಆದ್ದರಿಂದಲೇ ಪತ್ರಿಕೆಯ ಹೆಚ್ಚಿನ ಪುಟಗಳು ತುಂಬಿರುವುದು ಕಾಲಕಸದಂತಿರುವ, ಏನೇನೂ ವಿಚಾರಗಳು ಇಲ್ಲದ, ಅಥವಾ ರಾಜಕೀಯ ಸಭೆಗಳ ಭಾಷಣಗಳ ವರದಿಗಳಿಂದ.  
ಈವತ್ತಿನ ಕಾಲದ ಲೇಖನಗಳು ಭಾರತೀಯತೆಯ ಚರ್ವಿತ ಚರ್ವಣವನ್ನು ಒಗಟು ಅನ್ನುವಂತೆ ಮಾತಾಡುತ್ತವೆ. ಲೇಖಕರಿಗೆ ಭಾಷೆಯ ಮೇಲೆ ಯಾವುದೇ ಹಿಡಿತವಿಲ್ಲ. ಏಕೆಂದರೆ ಈವತ್ತಿನ ಹೆಚ್ಚಿನ ಪತ್ರಕರ್ತರು ಹೆಚ್ಚು ಓದಿಕೊಂಡವರಲ್ಲ. ನಿಮಗೆ ಓದುಗರ ಗಮನ ಸೆಳೆಯುವ ಸಾಮರ್ಥ್ಯವಿರಬೇಕಾಗುತ್ತದೆ. ಓದುಗರ ಆಸಕ್ತಿಯನ್ನು ಮೊದಲ ಕೆಲವು ಸಾಲುಗಳಲ್ಲೇ ಹಿಡಿದಿಡುವುದು ನಿಮಗೆ ಸಾಧ್ಯವಾಗುವುದಿಲ್ಲವಾದರೆ, ನೀವು ಅವರನ್ನು ಖಂಡಿತಾ ಕಳೆದುಕೊಂಡಂತೆ.

ಮತ್ತು ಬರಿಸುವ ಪೇಯ!
ಒಂದು ಒಳ್ಳೆಯ ನಿಯಕಾಲಿಕೆ ಅಥವಾ ದಿನಪತ್ರಿಕೆ ಬೇರೆ ಬೇರೆ ವಿಷಯಗಳ ಮತ್ತುಬರಿಸುವ ಪೇಯವಾಗಿರಬೇಕಾಗುತ್ತದೆ. ಅತ್ಯುತ್ತಮ ಶಾಲೆ ಮತ್ತು ಕಾಲೇಜುಗಳ ಪಟ್ಟಿಯನ್ನು ತಯಾರಿಸಿ ಅದನ್ನು ಪ್ರಕಟಿಸುವುದರಲ್ಲಿ ನನಗಾವ ಆಸಕ್ತಿಯೂ ಇಲ್ಲ. ಇಂತವುಗಳು ಪತ್ರಿಕೆಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುತ್ತಿವೆ. ಈ ಪಟ್ಟಿಗಳು ಸಂದೇಹಾಸ್ಪದವಾಗಿ ಇರುವುದಲ್ಲದೆ, ಬೇಸರ ತರಿಸುತ್ತವೆ. ನಿಜಕ್ಕೂ ಆಸಕ್ತಿದಾಯಕವಾದದ್ದು ಯಾವುದೆಂದರೆ, ನಮ್ಮ ರಾಜ್ಯಗಳು ಮಾಡುತ್ತಿರುವ ಅಭಿವೃದ್ಧಿಗೆ ಸಂಬಂಧಿಸಿದ ಸಾಧನೆಗಳ ಸಮೀಕ್ಷೆ. ಕೇವಲ ಗೋಧಿ ಮತ್ತು ಬತ್ತ ಬೆಳೆಯುತ್ತಿದ್ದ ಭಾರತದಲ್ಲಿ ನಡೆದ ಹಸಿರು ಕ್ರಾಂತಿಯ ಬಗ್ಗೆ ಕೆಲವು ಲೇಖನಗಳು ಇರಬೇಕಾಗುತ್ತದೆ. ಜೊತೆಗೆ ಹೂ ಬೇಸಾಯದ ಬಗ್ಗೆ ಅಥವಾ ತೋಟಗಾರಿಕೆಯ ಬಗ್ಗೆಯೂ. ಕಿವಿ, ಆವ್ಕೊಡ ಅಥವಾ ಮಕಡಮಿಯ ಬೀಜ ಮತ್ತು ಅಂತವುಗಳನ್ನು ಬೆಳೆಯುವ ಬಗ್ಗೆ, ಆರ್ಕಿಡ್ ಮತ್ತು ಹೊರಗಿನಿಂದ ಬಂದ ಲಿಲ್ಲಿ ಹೂಗಳ ಬಗ್ಗೆ ಮತ್ತು ಅವುಗಳು ತರಬಹುದಾದ ವರಮಾನದ ಬಗ್ಗೆ ಲೇಖನಗಳನ್ನು ಬರೆಯುವ ಅಗತ್ಯವಿದೆ. ಅಂತಹ ಲೇಖನಗಳು ಓದುಗರಲ್ಲಿ, ಉದ್ಯಮಿಗಳಲ್ಲಿ ಆಸಕ್ತಿ ಮೂಡಿಸುತ್ತವೆ ಮತ್ತು ಕೃಷಿ ವಿಶ್ವವಿದ್ಯಾಲಯಗಳು ಪ್ರೇರಣೆ ಪಡೆದು, ಸಂಶೋಧನೆಗಳಲ್ಲಿ ತೊಡಗುವುದಕ್ಕೆ ಸಹಾಯಆಗುತ್ತವೆ.

ಚಿತ್ರವೂ 'ತಿಳಿಸುತ್ತದೆ'
ಪತ್ರಿಕೆಯೊಂದರ ಚಿತ್ರಾತ್ಮಕ ಬರಹಗಳು ಬಹಳ ಮುಖ್ಯವಾದವುಗಳು. ಅವು ಬರಹಗಳಿಗಿಂತ ಹೆಚ್ಚಿನ ಪ್ರಭಾವ ಬೀರಬಲ್ಲವು. ಜೊತೆಗೆ ಬೇಗ ಗಮನ ಸೆಳೆಯಬಲ್ಲವು. ಒಂದು ಚಿತ್ರ ಕೂಡ 'ತಿಳಿಸುತ್ತದೆ, ರಂಜಿಸುತ್ತದೆ ಮತ್ತು ಪ್ರಚೋದಿಸುತ್ತದೆ.' ಈವತ್ತಿನ ಪತ್ರಕರ್ತರು, ತಲೆಬರಹಗಳಿಗೆ ನೀಡಬೇಕಾದ ಮಹತ್ವವನ್ನು ನೀಡುತ್ತಿಲ್ಲ. ಯಾವುದೇ ಒಂದು ಅಪೂರ್ಣವಾದ, ತಪ್ಪಾದ ತಲೆಬರಹ ಚಿತ್ರದ ಪರಿಣಾಮವನ್ನೇ ಹಾಳುಮಾಡಬಲ್ಲದು.
ಈವತ್ತಿನ ಮಾರುಕಟ್ಟೆ ಸ್ಪರ್ಧಾತ್ಮಕವಾದದ್ದು. ಆದ್ದರಿಂದ ನೀವು ಯಾವಾಗಲೂ ನಿಮ್ಮ ಕಿವಿಗಳನ್ನು ತೆರೆದಿಟ್ಟುಕೊಳ್ಳಬೇಕು. ಯಾರು ನಿಮ್ಮ ಓದುಗರು?, ಅವರ ಆಸಕ್ತಿಗಳೇನು?, ಅವರೆಷ್ಟು ಬುದ್ಧಿವಂತರು?, ಎನ್ನುವುದರ ಮೇಲೆ ನಿಯತಕಾಲಿಕೆಗಳು ಹೆಚ್ಚು ಗಂಭೀರವಾಗಿರಬೇಕಾಗುತ್ತದೆ ಮತ್ತು ಅವು ಈವತ್ತು ಇರುವುದಕ್ಕಿಂತಲೂ ಹೆಚ್ಚು ರಂಜನೀಯವಾಗಿಯೂ ಇರಬೇಕಾಗುತ್ತದೆ. ಭಾರತೀಯರಿಗೆ ಹಾಸ್ಯ ಪ್ರಜ್ಞೆ ತುಸು ಕಡಿಮೆ. ನಮ್ಮಲ್ಲೆ ನುರಿತ ದಕ್ಷ ಕಾರ್ಟೂನಿಸ್ಟ್‌ಗಳಿದ್ದರೂ, ನಾವು ವಿದೇಶಿ ಪ್ರತಿನಿಧಿ ಮಂಡಲಿ ಒದಗಿಸುವ ಬೆತ್ತಲೆ ಕಾರ್ಟೂನ್‌ಗಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿತರಾಗಿದ್ದೇವೆ. ಯೋಚಿಸಿ, ನಮ್ಮ ಡೆನ್ನೀಸ್ ದಿ ಮೆನೇಸ್ ಯಾಕಾಗಬಾರದು?

ಟೀಕೆ ಟಿಪ್ಪಣಿ
ನಿಯತಕಾಲಕ್ಕೆ ಸಂಬಂಧಿಸಿದ ಹಾಗೆ ಮತ್ತೊಂದು ಆಲೋಚಿಸಬೇಕಾದ ವಿಷಯವೆಂದರೆ, ಧಾರ್ಮಿಕ  ಆಚರಣೆಗಳ ಬಗ್ಗೆ, ಜ್ಯೋತಿಷ್ಯ ಶಾಸ್ತ್ರದ ಬಗ್ಗೆ, ಜಾತಕಗಳ ಬಗ್ಗೆ, ಮೂಢನಂಬಿಕೆಗಳು ಮತ್ತು ಇಂತಹ ವಿಷಯಗಳ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಸೇರಿಸುವುದು. ಇವುಗಳಲ್ಲಿ ಅನೇಕ ವಿಷಯಗಳು ಅವೈಚಾರಿಕವಾಗಿವೆ. ಧರ್ಮವೆನ್ನುವುದು ಈ ದೇಶದಲ್ಲಿ ಒಂದು ಪಿಡುಗಾಗಿ ಪರಿಣಮಿಸಿದೆ. ಉದಾಹರಣೆಗೆ- ಕುಂಭಮೇಳವನ್ನು ತೆಗೆದುಕೊಳ್ಳೋಣ. ನೂಕುನುಗ್ಗಲು ತಡೆಯಲು, ಸುವ್ಯವಸ್ಥೆ ಕಲ್ಪಿಸಲು, ರಾಜ್ಯ ತನ್ನ ಬೊಕ್ಕಸದಿಂದ ಹಣ ಖರ್ಚು ಮಾಡಬೇಕಾಗುತ್ತದೆ. ಕೋಟಿಗಟ್ಟಲೆ ಹಣವನ್ನು ಹಜ್ ಯಾತ್ರೆಗಳಿಗಾಗಿ ಮುಸಲ್ಮಾನ ಯಾತ್ರಾರ್ಥಿಗಳಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗುತ್ತದೆ. ಖಂಡಿತ ನಿಜ, ಇಂತಹ ಟೀಕೆ ಮಾಡಿ ಬರೆದ ವಿಮರ್ಶಾತ್ಮಕ ಲೇಖನಗಳು ಜನರ ಭಾವನೆಗಳನ್ನು ಕೆಣಕುತ್ತವೆ. ಏಕೆಂದರೆ ಈ ದೇಶದಲ್ಲಿ ಧರ್ಮ ಒಂದು ಸೂಕ್ಷ್ಮವಾದ ವಿಚಾರವಾಗಿದೆ ಮತ್ತು ಅದು ಭಾರತೀಯನ ಬದುಕಿನ ಬಹು ಮುಖ್ಯ ಭಾಗವಾಗಿದೆ. ಆದರೆ ದಾರಿಗಳಿವೆ ಅದೆಲ್ಲವನ್ನೂ ಹೇಳುವುದಕ್ಕೆ. ಹಾಗೆ ಹೇಳಿಯೂ ಶಿವಸೇನೆ ಕಾರ್ಯಕರ್ತರು ನಿಮ್ಮ ಕಚೇರಿಯನ್ನು ಸುಡದಂತೆ ಸುಮ್ಮನಾಗಿಸುವುದಕ್ಕೆ.

ನಾಚಿಕೆಗೇಡಿತನ ಸುತ್ತ ಇರುವಾಗ
'ಈಗ ತಾನೆ ಬಂದ ಸುದ್ದಿ,' ಇದು ಈವತ್ತಿನ ಚಾಳಿ. ಅದು ಟೆಲಿವಿಷಿನ್ ಇರಬಹುದು, ಘಟನೆ ಆಗುವುದಕ್ಕೆ ಮುಂಚಿತವಾಗಿಯೇ ಬಯಲು ಮಾಡುವ ಅಥವಾ ಮುಚ್ಚುಮರೆಯ ಕುಟುಕು ಕಾರ್ಯಾಚರಣೆಯಿಂದಾಗಿ ಹಗರಣಗಳನ್ನು ಬಯಲಿಗೆಳೆಯುವ ಮ್ಯಾಗಝಿನ್ ಮತ್ತು ಪತ್ರಿಕೆಗಳ ಚಟುವುಟಿಕೆಗಳೂ ಆಗಿರಬಹುದು. ನಿಜಕ್ಕೂ ಇವೆಲ್ಲ ಮುಖ್ಯವಾದವುಗಳು. ನಾನು ನಂಬಿದ್ದೇನೆ: ಒಬ್ಬನ ಮುಖವಾಡ ಕಳಚಬೇಕಾದಾಗ, ಪತ್ರಕರ್ತನೊಬ್ಬ ಬಳಸುವ ಯಾವುದೇ ವಿಧಾನವನ್ನು ಸಮರ್ಥಿಸಬೇಕಾಗುತ್ತದೆ. ಹೇಳುವುದೊಂದು ಮಾಡುವುದು ಇನ್ನೊಂದು ಎಂದಾಗ ಇದೆಲ್ಲ ಬೇಕಾಗುತ್ತದೆ. ಈವತ್ತಿನ ಜಗತ್ತಿನಲ್ಲಿ, ನಾಚಿಕೆಗೇಡಿತನದ ಕೆಲಸ ಮಾಡುವವರೇ ಸುತ್ತೆಲ್ಲ ಇರುವಾಗ, ಅದನ್ನು ಬಯಲಿಗೆಳೆಯುವ ಕರ್ತವ್ಯ ಪತ್ರಕರ್ತನದು. ಆದರೆ ಪತ್ರಕರ್ತ ತನ್ನ ನೈತಿಕತೆ ಉಳಿಸಿಕೊಳ್ಳಬೇಕಾಗುತ್ತದೆ. ಅವನು ಎಲ್ಲ ಸಂಶಯಗಳಿಂದ ಮುಕ್ತನಾಗಿರಬೇಕಾಗುತ್ತದೆ. ಇಲ್ಲವೆಂದಲ್ಲ, ಪತ್ರಕರ್ತರೇ ವಂಚನೆ ಮಾಡಿ, ಹಣ ಸುಲಿದ ನಿದರ್ಶನಗಳಿಲ್ಲವೆಂದಲ್ಲ. ಆದರೆ, ಮುಚ್ಚುಮರೆಯಿಂದ ನಡೆಸುವ (ಸ್ಟಿಂಗ್) ಕಾರ್ಯಕ್ಕೆ ನನ್ನ ಬೆಂಬಲವಿದೆ. ಇದರಿಂದಾಗಿ ಹೆಚ್ಚಿನ ಒಳಿತಾಗುತ್ತದೆ. ಮತ್ತು ಸಾರ್ವಜನಿಕ ಹಿತವನ್ನು ಕಾಪಾಡಬಹುದಾಗಿದೆ. ಸಾರ್ವಜನಿಕ ನೈತಿಕತೆ ಎತ್ತಿ ಹಿಡಿಯುವುದಕ್ಕಾಗಿ ಇದರ ಅಗತ್ಯವಿದೆ.

ಕಾನೂನು ಪ್ರತಿಯೊಬ್ಬರಿಗೂ
ಪ್ರತಿಯೊಬ್ಬ ನಾಗರಿಕನಿಗೂ ತನ್ನ ಖಾಸಗಿ ಬದುಕಿನ ಮೇಲೆ ಹಕ್ಕಿದೆ ಮತ್ತದನ್ನು ಯಾರೇ ಉಲ್ಲಂಘಿಸಿದರೂ, ಅವರನ್ನು ಶಿಕ್ಷಿಸಬೇಕಾಗುತ್ತದೆ. ಒಬ್ಬ ನಾಗರಿಕನ ಖಾಸಗಿ ಬದುಕು ಮತ್ತು ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳಾದ ರಾಜಕಾರಣಿಗಳು, ಸರಕಾರಿ ನೌಕರರು, ಸೇನೆಯಲ್ಲಿರುವವರು, ನ್ಯಾಯಾಂಗದ ಸದಸ್ಯರು, ಧಾರ್ಮಿಕ ಸಂಸ್ಥೆಗಳಲ್ಲಿರುವವರು, ಉದ್ಧಿಮೆದಾರರು ಮತ್ತು ಸಾರ್ವಜನಿಕ ಮೌಲ್ಯಗಳನ್ನು ಬೋಧಿಸುವವರು ಸಾರ್ವಜನಿಕ ಬದುಕು ಮತ್ತು ವೈಯಕ್ತಿಕ ಬದುಕಿನ ನಡುವಿನ ಅಂತರತಮದ ಗೆರೆ ಸ್ಪಷ್ಟವಾಗಿರಬೇಕು. ಸಾರ್ವಜನಿಕವಾಗಿ ಅವರು ನೀಡುವ ಉಪದೇಶ ಅವರದೇ ಬದುಕಿನ ಆಚರಣೆಯಲ್ಲಿ ಇಲ್ಲವಾದರೆ, ಅವರು ದೇಶಕ್ಕೆ ವಂಚಿಸುತ್ತಿದ್ದರೆ, ಅಥವಾ ಭ್ರಷ್ಟತೆಯಲ್ಲಿ ತೊಡಗಿದ್ದರೆ, ಅಂಥವರ ಬಂಡವಾಳ ಬಯಲು ಮಾಡಲು ನಡೆಸುವ ಕುಟುಕು ಕಾರ್ಯವನ್ನು ನಾನು ಸಮರ್ಥಿಸುತ್ತೇನೆ.

ವಿನ್ಯಾಸ ಬದಲಿಸುವ ಮುನ್ನ
ಮುದ್ರಣ ಮಾಧ್ಯಮ ಹೊಸ ಓದುಗರನ್ನು ಹುಡುಕಿಕೊಳ್ಳುವುದಕ್ಕಾಗಿ, ತನ್ನ ರೂಪವನ್ನು ಆಗಾಗ್ಗೆ ಬದಲಿಸುವ ತಂತ್ರಕ್ಕೆ ಮೊರೆ ಹೋಗುತ್ತದೆ. ಒಂದು ಪತ್ರಿಕೆ ಅಥವಾ ನಿಯತಕಾಲಿಕೆ ತನ್ನ ಚೌಕಟ್ಟನ್ನು ಪದೇ ಪದೇ ಬದಲಿಸುವುದು ಗೊಂದಲವನ್ನುಂಟು ಮಾಡುವ ಸಂಗತಿ. ಅದು ಓದುಗನಿಗೆ ಆತಂಕವನ್ನುಂಟು ಮಾಡುತ್ತದೆ. ದಿನಪತ್ರಿಕೆಗಳು ಮತ್ತು ವಾರಪತ್ರಿಕೆಗಳು ಓದುಗನಿಗೆ ಒಂದು ರೀತಿಯಲ್ಲಿ ರೂಢಿಯಾಗಿ ಆಪ್ತವಾಗುತ್ತವೆ. ಪುಟಗಳ ಜೋಡಣೆಯ ರೀತಿ, ಇತ್ಯಾದಿಗಳಿಂದಾಗಿ. ಇದರಿಂದಾಗಿ ಓದುಗನಿಗೆ ಒಂದು ರೀತಿಯ ಆರಾಮ, ಅವುಗಳನ್ನು ಓದುವುದಕ್ಕೆ. ಒಂದು ವೇಳೆ ಬದಲಾವಣೆ ಮಾಡಲೇಬೇಕಾಗಿ ಬಂದರೆ, ಗೊತ್ತಾಗದಂತೆ ಸೂಕ್ಷ್ಮವಾಗಿ ಮಾಡಬೇಕು. ಆಗಾಗ್ಗೆ,  ದುಬಾರಿಯ ವಿನ್ಯಾಸಕರನ್ನು ಕರೆಸಿ,   ಅವರಿಗೆ ಇಡೀ ಪತ್ರಿಕೆಯ ವಿನ್ಯಾಸವನ್ನೇ ಬದಲಿಸಲು ಗುತ್ತಿಗೆ ನೀಡಲಾಗುತ್ತದೆ. ಅವರು ಆಮೂಲಾಗ್ರ ಬದಲಾವಣೆ ತರುತ್ತಾರೆ. ನೆನಪಿಡಿ, ಯಾವುದೇ ಬದಲಾವಣೆಗಳು ವಿಪರೀತ ಅನ್ನಿಸಿದರೆ, ಖಂಡಿತವಾಗಿ ನೀವು ಓದುಗರನ್ನು ಕಳೆದುಕೊಳ್ಳುತ್ತೀರಿ.

ಆಂಗ್ಲಮೂಲ: ಖುಷ್ವಂತ್‌ಸಿಂಗ್
ಅನುವಾದ: ಎಂ.ಎಸ್. ರುದ್ರೇಶ್ವರಸ್ವಾಮಿ

swamy_dop@yahoo.co.in
(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555 ಸಖಿ ಖರೀದಿಗಾಗಿ http://www.magzter.com/IN/Express-Network-Private-Limited/Sakhi/Women%27s-Interest/40078 ಗೆ ಭೇಟಿನೀಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement