ಮೋದಿಯಿಂದ ಆಡ್ವಾಣಿ ಭೇಟಿ, ಪಟ್ಟು ಬಿಡದ ಬಿಜೆಪಿ ಭೀಷ್ಮ
ಭೋಪಾಲ್ ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ..
ನವದೆಹಲಿ: ಭೋಪಾಲ್ ಟಿಕೆಟ್ಗಾಗಿ ಪಟ್ಟು ಹಿಡಿದಿರುವ ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರನ್ನು ಗುರುವಾರ ಬೆಳಗ್ಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಭೇಟಿ ಮಾಡಿದ್ದಾರೆ. ಆದರೆ ಬಿಜೆಪಿ ಭೀಷ್ಮನ ಮನವೊಲಿಸುವಲ್ಲಿ ಮೋದಿ ವಿಫಲವಾಗಿದ್ದಾರೆ.
ಇಂದು ಬೆಳಗ್ಗೆ ಆಡ್ವಾಣಿ ಅವರ ನಿವಾಸಕ್ಕೆ ತೆರಳಿದ ಮೋದಿ, ಈ ಬಾರಿಯೂ ಗಾಂಧಿನಗರದಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದರು. ಆದರೆ ಮೋದಿಯ ಮನವಿಯನ್ನು ತಿರಸ್ಕರಿಸಿರುವ ಆಡ್ವಾಣಿ, ಯಾವುದೇ ಕಾರಣಕ್ಕೂ ತಾವು ಗಾಂಧಿನಗರದಿಂದ ಸ್ಪರ್ಧಿಸುವುದಿಲ್ಲ. ಮಧ್ಯಪ್ರದೇಶದ ಭೋಪಾಲ್ ಲೋಕಸಭಾ ಕ್ಷೇತ್ರದಿಂದಲೇ ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮೋದಿ ಸಂಧಾನ ವಿಫಲವಾದ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಈಗ ಆಡ್ವಾಣಿ ಮನವೊಲಿಸುವ ಕಾರ್ಯಕ್ಕೆ ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರನ್ನು ನೇಮಕ ಮಾಡಿದ್ದು, ಮತ್ತೊಂದು ಸುತ್ತಿನ ಮನವೊಲಿಕೆ ಯತ್ನ ನಡೆಯಲಿದೆ.
ಬಿಜೆಪಿಯಲ್ಲಿ ಮತ್ತೆ ಭಿನ್ನಧ್ವನಿ
ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಮತ್ತು ಪಕ್ಷದ ಉಳಿದ ನಾಯಕತ್ವದ ನಡುವಿನ ಭಿನ್ನಮತ ಮತ್ತೊಮ್ಮೆ ಬಹಿರಂಗವಾಗಿದೆ. ಗಾಂಧಿನಗರದ ಟಿಕೆಟ್ಗೆ ಸಂಬಂಧಿಸಿ ಹಿರಿಯ ಮುಖಂಡ ಮೋದಿ ಮತ್ತಿರರ ಜತೆಗೆ ಮತ್ತೊಮ್ಮೆ ಮುನಿಸಿಕೊಂಡಿದ್ದಾರೆ.
ದೆಹಲಿಯಲ್ಲಿ ಬುಧವಾರ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಆಡ್ವಾಣಿ ಅವರಿಗೆ ಗಾಂಧಿನಗರದಿಂದ ಟಿಕೆಟ್ ನೀಡಲಾಗಿದೆ.
ಗಾಂಧಿನಗರವನ್ನು ಆಡ್ವಾಣಿ ಐದು ಬಾರಿ ಸ್ಪರ್ಧಿಸಿದ್ದಾರೆ. ಆದರೆ, ಮೋದಿ ಜತೆಗಿನ ಸಂಬಂಧ ಹಳಸಿದ ಹಿನ್ನೆಲೆಯಲ್ಲಿ ಅವರು ಮಧ್ಯಪ್ರದೇಶದ ಭೋಪಾಲ್ನಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಮ್ಮ ಮನದಿಚ್ಛೆಯನ್ನು ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರಿಗೂ ಮುಟ್ಟಿಸಿದ್ದ ಅವರು ಪಕ್ಷದ ಸಂಸದೀಯ ಮಂಡಳಿ ಹಾಗೂ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಿಂದ ದೂರ ಉಳಿದಿದ್ದರು. ತಮ್ಮ ಟಿಕೆಟ್ಗೆ ಸಂಬಂಧಿಸಿದ ನಿರ್ಧಾರ ನಡೆಯಲಿರುವ ಹಿನ್ನೆಲೆಯಲ್ಲಿ ಸಭೆಗೆ ಗೈರಾಗಿದ್ದಾಗಿ ತಿಳಿಸಿದ್ದರೂ ಟಿಕೆಟ್ಗೆ ಸಂಬಂಧಿಸಿದ ಅಸಮಾಧಾನವೇ ಸಭೆಯಿಂದ ದೂರ ಉಳಿಯಲು ಮೂಲ ಕಾರಣ ಎನ್ನಲಾಗಿದೆ.
ಆರೆಸ್ಸೆಸ್- ಮೋದಿ ಭೇಟಿ: ಕೇಂದ್ರೀಯ ಚುನಾವಣಾ ಸಮಿತಿ ಸಭೆ ಬಳಿಕ ಮೋದಿ ಅವರು ನೇರವಾಗಿ ಆರೆಸ್ಸೆಸ್ ಕಚೇರಿಗೆ ತೆರಳಿದರು. ಕೆಲಕಾಲ ಆರೆಸ್ಸೆಸ್ ಮುಖ್ಯಸ್ಥ ಮೋಹನ್ಭಾಗವತ್ ಜತೆಗೆ ಮಾತುಕತೆ ನಡೆಸಿದರು. ಈ ವೇಳೆ ಆಡ್ವಾಣಿ ಟಿಕೆಟ್ಗೆ ಸಂಬಂಧಿಸಿದ ವಿಚಾರ ಚರ್ಚೆಗೆ ಬಂದಿದೆ ಎಂದು ಹೇಳಲಾಗಿದೆ.
ಪ್ರಮುಖರು: ಹೇಮಮಾಲಿನಿ- ಮಥುರಾ, ರಾಜವರ್ಧನ್- ಜೈಪುರ ಗ್ರಾಮೀಣ, ಜಗದಂಬಿಕಾ ಪಾಲ್- ದೊಮರಿಯಗಂಜ್, ಜಸ್ವಂತ್ ಸಿಂಗ್- ದಡೋದ್.
ಮೋದಿಗೆ ವಡೋದರಾ, ಆಡ್ವಾಣಿಗೆ ಗಾಂಧಿನಗರ
ಬಿಜೆಪಿ ಪಿಎಂ ಅಭ್ಯರ್ಥಿ ನರೇಂದ್ರ ಮೋದಿ ವಾರಾಣಸಿ ಜತೆಗೆ ವಡೋದರದಿಂದಲೂ ಸ್ಪರ್ಧಿಸಲಿದ್ದಾರೆ. ಎಲ್.ಕೆ. ಆಡ್ವಾಣಿ ಗಾಂಧಿನಗರದಿಂದ ಟಿಕೆಟ್ ಗಿಟ್ಟಿಸಿದ್ದಾರೆ. ದೆಹಲಿಯಲ್ಲಿ ಬುಧವಾರ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ್ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಚುನಾವಣಾ ಸಮಿತಿ ಸಭೆ ಈ ನಿರ್ಧಾರ ತೆಗೆದುಕೊಂಡಿದೆ. ಗಾಂಧಿನಗರವನ್ನು ಮೋದಿಗೆ ಬಿಟ್ಟುಕೊಡಬೇಕೆಂಬ ಒತ್ತಡದಿಂದಾಗಿ ಮುನಿಸಿಕೊಂಡಿದ್ದ ಆಡ್ವಾಣಿ ಸಭೆಯಿಂದ ದೂರವಿದ್ದರು. ಇದರಿಂದ ಮೋದಿ, ಆಡ್ವಾಣಿ ಟೀಂ ನಡುವಿನ ಜಗಳ ಮತ್ತೆ ಬೀದಿಗೆ ಬಂದಂತಾಗಿತ್ತು. ಒತ್ತಡತಂತ್ರದಿಂದ ಬೇಸತ್ತಿದ್ದ ಆಡ್ವಾಣಿ ಒಂದು ಹಂತದಲ್ಲಿ ಭೋಪಾಲ್ನಿಂದ ಸ್ಪರ್ಧಿಸುವ ಸಂದೇಶವನ್ನು ರಾಜನಾಥ್ ಸಿಂಗ್ರಿಗೆ ರವಾನಿಸಿದ್ದರು.