ಹೆಸರಾಂತ ಲೇಖಕ ಖುಷ್ವಂತ್ ಸಿಂಗ್ ನಿಧನ
ಖ್ಯಾತ ಲೇಖಕ , ಪತ್ರಕರ್ತ ಖುಷ್ವಂತ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು....
ನವದೆಹಲಿ: ಖ್ಯಾತ ಲೇಖಕ , ಪತ್ರಕರ್ತ ಖುಷ್ವಂತ್ ಸಿಂಗ್ ಗುರುವಾರ ನಿಧನರಾಗಿದ್ದಾರೆ. ಅವರಿಗೆ 99 ವರ್ಷ ವಯಸ್ಸಾಗಿತ್ತು.
ಭಾರತದ ಖ್ಯಾತ ಲೇಖಕ ಹಾಗು ಅಂಕಣಕಾರರಾಗಿದ್ದ ಖುಷ್ವಂತ್ ಸಿಂಗ್ ಫೆ.2 ರಂದು ಈಗ ಪಾಕಿಸ್ತಾನದ ಪಾಲಾಗಿರುವ ಪಂಜಾಬ್‌ನ ಹಡಾಲಿಯಲ್ಲಿ ಜನಿಸಿದ್ದರು.
ಯೋಜನಾ ಹಾಗು ಇಲ್ಯುಸ್ಟ್ರೇಟೆಡ್ ವೀಕ್ಲಿ, ದ ನ್ಯಾಷನಲ್ ಹೆರಾಲ್ಡ್, ಹಿಂದೂಸ್ಥಾನ್ ಟೈಮ್ಸ್ ಪತ್ರಿಕೆಯ ಸಂಪಾದಕರಾಗಿದ್ದ ಖುಷ್ವಂತ್ ಸಿಂಗ್ ತಮ್ಮ ತೀಕ್ಷ್ಣ ಬರಹಗಳಿಂದಲೇ ಖ್ಯಾತರಾದವರು. ಟ್ರೈನ್ ಟು ಪಾಕಿಸ್ತಾನ್, ಐ ಶಾಲ್ ನೋಟ್ ಹಿಯರ್ ದ ನೈಟಿಂಗೇಲ್ ಮತ್ತು ಡೆಲ್ಲಿ ಮೊದಲಾದ ಕ್ಲಾಸಿಕ್‌ಗಳನ್ನು ರಚಿಸಿದ್ದ ಸಿಂಗ್, 95 ನೇ ವಯಸ್ಸಿನಲ್ಲಿ ದ ಸನ್‌ಸೆಟ್ ಕ್ಲಬ್ ಎಂಬ ಕಾದಂಬರಿ ಬರೆದಿದ್ದರು.
ಸಿಖ್ಖರ ಧರ್ಮ, ಸಂಸ್ಕೃತಿಯ ಬಗ್ಗೆ ಬರೆದ ದ ಹಿಸ್ಟರಿ ಆಫ್ ಸಿಖ್‌ಸ್ ಎಂಬ ನಾನ್- ಫಿಕ್ಷನ್ ಎರಡು ಸಂಪುಟಗಳಲ್ಲಿ ಪ್ರಕಟವಾಗಿತ್ತು. 2002ರಲ್ಲಿ ಅವರ ಆತ್ಮಕತೆ "Truth, Love and a Little Malice" ಪ್ರಕಟವಾಗಿತ್ತು.
1980-1986ರ ಅವಧಿಯಲ್ಲಿ ಸಂಸದರಾಗಿ ಕಾರ್ಯ ನಿರ್ವಹಿಸಿದ್ದ ಸಿಂಗ್‌ಗೆ 1974ರಲ್ಲಿ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿತ್ತು. ಆದರೆ ಭಾರತೀಯ ಸೇನೆ ಅಮೃತ್‌ಸರದ ಸ್ವರ್ಣ ಮಂದಿರದಲ್ಲಿ ನಡೆಸಿದ ಗೋಲಿಬಾರ್‌ನ್ನು ಖಂಡಿಸಿ 1984ರಲ್ಲಿ ಪ್ರಶಸ್ತಿಯನ್ನು ವಾಪಸ್ ಮಾಡಿದ್ದರು.