ಮಂತ್ರಾಲಯದ ಹಿರಿ ಶ್ರೀಗಳು ಹರಿಪಾದೈಕ್ಯ
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಶ್ರೀಸುಯತೀಂದ್ರ ತೀರ್ಥರು(80) ಗುರುವಾರ ತಡರಾತ್ರಿ ..
ಕನ್ನಡಪ್ರಭ ವಾರ್ತೆ ರಾಯಚೂರು ಮಾ.20
ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿಗಳಾಗಿದ್ದ ಶ್ರೀಸುಯತೀಂದ್ರ ತೀರ್ಥರು(80) ಗುರುವಾರ ತಡರಾತ್ರಿ ಹರಿಪಾದೈಕ್ಯ(ಅಸ್ತಂಗತ)ರಾಗಿದ್ದಾರೆ. ಅವರು ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ರೀಮಠದಲ್ಲಿಯೇ ಗುರುವಾರ ತಡರಾತ್ರಿ 12.10ರ ಸುಮಾರಿಗೆ ಅವರು ವಿಶ್ರಾಂತಿ ವೇಳೆ ಹರಿಪಾದೈಕ್ಯರಾಗಿದ್ದಾರೆಂದು ಶ್ರೀಮಠ ತಿಳಿಸಿದ್ದು, ಶ್ರೀಗಳ ಅಂತಿಮ ವಿಧಿ ವಿಧಾನಗಳನ್ನು ಶುಕ್ರವಾರ ಬೆಳಗ್ಗೆ 9ರ ಹೊತ್ತಿಗೆ ಶ್ರೀಮಠದ ಪ್ರಾಕಾರದಲ್ಲಿ ನೆರವೇರಿಸಲಾಗುತ್ತದೆ ಎಂದು ತಿಳಿಸಿದೆ.
ಆಗಷ್ಟೇ ಮಠದಲ್ಲಿ ನಡೆದ ಮಹಾ ಮಂಗಳಾರತಿ ಮುಗಿಸಿ ಬಂದು ಕುಳಿತಿದ್ದ ಸುಯತೀಂದ್ರ ತೀರ್ಥರು ನಂತರ ಹಾಗೆಯೇ ಬೃಂದಾವನಸ್ಥರಾದರು. ಇತ್ತೀಚೆಗೆ ಶ್ರೀಗಳು ಮಾತನಾಡುವುದನ್ನು ಕಡಿಮೆ ಮಾಡಿದ್ದರು ಎಂದು ಮಠದ ಮೂಲಗಳು ಹೇಳಿವೆ. ಶ್ರೀ ಸುಯತೀಂದ್ರ ತೀರ್ಥರ ಗುರುಗಳಾಗಿದ್ದ ಶ್ರೀ ಸುಶಮೀಂದ್ರತೀರ್ಥರ ವೃಂದಾವನ ಸ್ಥಳದ ಪಕ್ಕದಲ್ಲಿಯೇ ಶ್ರೀ ಸುಯತೀಂದ್ರ ತೀರ್ಥರ ವೃಂದಾವನಸ್ಥರಾಗುವ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಗುತ್ತದೆ ಎಂದು ಶ್ರೀಮಠ ತಿಳಿಸಿದೆ.
ನವ ಮಂತ್ರಾಲಯದ ಹರಿಕಾರರು: 2006ರಿಂದ ಅವರು ಶ್ರೀಮಠದ ಪೀಠಾಧಿಪತಿಗಳಾಗಿದ್ದರು. ಪ್ರವಾಹೋತ್ತರದಲ್ಲಿ ನವಮಂತ್ರಾಲಯದ ನಿರ್ಮಾಣದಲ್ಲಿ ತಮ್ಮದೇ ಆದ ರೀತಿಯಲ್ಲಿ ಮಾರ್ಗದರ್ಶನ ನೀಡುವ ಮೂಲಕ ಶ್ರೀಗಳು ಮಂತ್ರಾಲಯದ ಸಮಗ್ರ ಪ್ರಗತಿಯ ಹರಿಕಾರರಾಗಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಈಚೆಗೆ ಹೈದರಾಬಾದ್ ಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರೋಗ್ಯ ಸುಧಾರಣೆ ನಂತರ ಅವರನ್ನು ಶ್ರೀಗುರುಭಕ್ತಿ ಉತ್ಸವ ಕಾರ್ಯಕ್ರಮಕ್ಕೆ ಕರೆತರಲಾಗಿತ್ತು.
ಹಿನ್ನೆಲೆ: ಶ್ರೀ ಸುಯತೀಂದ್ರತೀರ್ಥರು ಪೂರ್ವಾಶ್ರಮದಲ್ಲಿ ಗದಗ ಜಿಲ್ಲೆ ಮುಂಡರಗಿ ಪೇಠಾಲೂರು ನವರಾಗಿದ್ದು, ಬಿಎಸ್ಸಿ ಬಿಇಡಿ, ಎಎಂಐಇ ಅಧ್ಯಯನ ಮಾಡಿದ್ದರು. ಆನಂತರದಲ್ಲಿ ಸಾಹಿತ್ಯ, ವೇದ ಶಾಸ್ತ್ರಗಳ ಅಧ್ಯಯನವನ್ನು ಹಾಗೂ ನ್ಯಾಯಸುಧಾ ಮತ್ತಿತರೆ ಧಾರ್ಮಿಕ ವ್ಯಾಸಂಗ ಶ್ರೀ ಸುಯಮೀಂದ್ರತೀರ್ಥರ ಬಳಿ ಮಾಡಿದ್ದರು.
ಆ ನಂತರದಲ್ಲಿ ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿ ಶ್ರೀಮಠದ ಧರ್ಮಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅದೇ ವೇಳೆ ಗುರುಗಳಾಗಿದ್ದ ಶ್ರೀಸುಶಮೀಂದ್ರ ತೀರ್ಥರ ಗಮನಕ್ಕೆ ಬಂದಿದ್ದ ಶ್ರೀಸುಶಿಲೇಂದ್ರಾಚಾರ್ಯರು (ಪೂರ್ವಾಶ್ರಮದಲ್ಲಿ ಶ್ರೀಸುಯತೀಂದ್ರ ತೀರ್ಥರ ಹೆಸರು) ನಂತರದಲ್ಲಿ ಶ್ರೀಮಠದ ಗುರುಗಳ ಆಪ್ತರಾದರು.
ನಂತರ ಮುಂದೆ ಜುಲೈ 4, 2006ರಲ್ಲಿ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಶ್ರೀ ಸುಶಮೀಂದ್ರತೀರ್ಥರ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಶ್ರೀಮಠಕ್ಕೆ ಉತ್ತರಾಧಿಕಾರಿಯಾಗಿ ನೇಮಕಗೊಂಡು ಶ್ರೀ ಸುಯತೀಂದ್ರತೀರ್ಥರಾಗಿ ನಾಮಕರಣಗೊಂಡಿದ್ದರು. 2006ರಿಂದ ಇಂದಿನವರೆಗೆ ಅವರು ಶ್ರೀಮಠದ ಸರ್ವ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕಳೆದ ವರ್ಷವಷ್ಟೇ ಶ್ರೀ ಸುಯತೀಂದ್ರ ತೀರ್ಥರು ತಮ್ಮ ಉತ್ತರಾಧಿಕಾರಿಯಾಗಿ ಶ್ರೀಸುಬುಧೇಂದ್ರ ತೀರ್ಥರನ್ನು ನೇಮಕ ಮಾಡಿದ್ದರು. ತಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಈಚೆಗೆ ತಮ್ಮ ಉತ್ತರಾಧಿಕಾರಿಗಳಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದ್ದರು.
ಸುಯಮೀಂದ್ರರ ಪಟ್ಟ ಶಿಷ್ಯ ಸುಶೀಲೇಂದ್ರ
ಸುಯತೀಂದ್ರ ಸ್ವಾಮೀಜಿಗಳ ಪೂರ್ವಾಶ್ರಮದ ಹೆಸರು ಸುಶೀಲೇಂದ್ರಾಚಾರ್ಯ. ಗದಗ ಜಿಲ್ಲೆಯ ಮುದರಂಗಿ ತಾಲೂಕಿನ ಪೇಟೆ ಆಲೂರು ಸ್ವಾಮೀಜಿಗಳ ಹುಟ್ಟೂರು. ಸುಶೀಲೇಂದ್ರಾಚಾರ್ಯ ಅವರು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಪೇಟೆ ಆಲೂರಿನಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಮುಂಡರಗಿಯಲ್ಲಿ ಪೂರ್ಣಗೊಳಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಿಎಸ್ಪಿ ಪಡೆದರು. ನಂತರ ಬೆಂಗಳೂರಿನಲ್ಲಿ ಬಿ.ಇಡಿ ಶಿಕ್ಷಣ ಪೂರೈಸಿದರು. ಇದಲ್ಲದೆ ಸ್ವಾಮೀಜಿಗಳು ಎಎಂಐಇ ಸರ್ಟಿಫಿಕೇಟ್ ಕೋರ್ಸ್ ಅನ್ನೂ ಮಾಡಿದ್ದಾರೆ. ಇದೇ ವೇಳೆ ಅವರು ಸುಯಮೀಂದ್ರ ಸ್ವಾಮೀಜಿಗಳಲ್ಲಿ ಸಾಹಿತ್ಯ ಮತ್ತು ವೇದ ಅಧ್ಯಯನ ನಡೆಸಿದರು. ಆ ಬಳಿಕ ಅವರು ನ್ಯಾಯಸುಧಾ ಹಾಗೂ ಇತರೆ ಶಾಸ್ತ್ರಗಳನ್ನು ಶ್ರೀರಾಘವೇಂದ್ರ ಮಠದ ಅರ್ಚಕ ರಾಮಾಚಾರ್ಯ ಅವರಲ್ಲಿ ಪೂರೈಸಿದರು.
ವಿದ್ಯಾಪೀಠದಲ್ಲಿ ಸೇವೆ: ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಸುಶೀಲೇಂದ್ರಾಚಾರ್ಯ ಅವರು ಭಾರತೀಯ ಸಂಸ್ಕೃತಿ ವಿದ್ಯಾಪೀಠವನ್ನು ಸೇರಿದರು. ಇದು ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದು. ಇಲ್ಲಿ ಅವರು ಸುಮಾರು 30 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇದೇ ಸಂಸ್ಥೆಯಲ್ಲಿ ಅವರು ಆರು ವರ್ಷಗಳ ಕಾಲ ಪ್ರಾಂಶುಪಾಲರಾಗಿಯೂ ಕಾರ್ಯ ನಿರ್ವಹಿಸಿದರು. ಈ ವೇಳೆ ಅವರು ಸಂಸ್ಥೆಗೆ ಹೊಸ ದಿಕ್ಕು, ಹೊಸ ರೂಪ ನೀಡಿದರು.
ಭಾರತೀಯ ಸಂಸ್ಕೃತಿ ವಿದ್ಯಾಪೀಠದಿಂದ ನಿವೃತ್ತರಾದ ಬಳಿಕ ತಮ್ಮನ್ನು ತಾವು ಶ್ರೀ ಗುರುರಾಜರ ಸೇವೆಗೆ ಅರ್ಪಿಸಿಕೊಂಡರು. ಶ್ರೀ ಗುರುರಾಜರ ಮೇಲಿನ ಇವರ ಭಕ್ತಿಗೆ ಮಂತ್ರಾಲಯದ ಆಗಿದ ಪೀಠಾಧಿಪತಿಯಾಗಿರುವ ಸುಶಮೀಂದ್ರ ಸ್ವಾಮೀಜಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೇ ಕಾರಣಕ್ಕೆ ಸುಶೀಲೇಂದ್ರಾಚಾರ್ಯ ಅವರನ್ನು ಶ್ರೀ ರಾಘವೇಂದ್ರ ಮಠದ ಬೆಂಗಳೂರಿನ ಶಾಖೆಯಾದ ಸೀತಾಪತಿ ಅಗ್ರಹಾರದ ಧರ್ಮಾಧಿಕಾರಿಯಾಗಿ ನೇಮಿಸಲಾಯಿತು.
ಇಲ್ಲೂ ಅವರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಸುಶೀಲೇಂದ್ರಾಚಾರ್ಯ ಅವರ ಬದ್ಧತೆ ಮತ್ತು ಪ್ರಾಮಾಣಿಕ ಸೇವೆ ಮೆಚ್ಚಿಕೊಂಡಿದ್ದ ಸುಶಮೀಂದ್ರರು ಅವರನ್ನು
ಮಂತ್ರಾಲಯಕ್ಕೆ ಕರೆಸಿಕೊಂಡರು. ಅಲ್ಲಿ ಮಠದ ದಿವಾನರನ್ನಾಗಿ ನೇಮಿಸಿದರು. ಇಲ್ಲೂ ಸುಶೀಲೇಂದ್ರಾಚಾರ್ಯರ ಪ್ರಾಮಾಣಿಕ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಶಿಸ್ತು ಮತ್ತು ಪ್ರಾಮಾಣಿಕತೆಗೆ ಹೆಸರಾದ ಆಚಾರ್ಯರು ತಮ್ಮ ಬಹುಮುಖರದು ಪ್ರತಿಭೆ. ವೇದ, ಶಾಸ್ತ್ರಪಾರಂಗತರಾಗಿದ್ದ ಅವರು ರಂಗೋಲಿ ಕಲೆಯಲ್ಲಿ ಸ್ವಾಮೀಜಿ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು.
ಜು.4, 2006ರಂದು ಮಠದ ಪೀಠಾಧಿಪತಿ ಸುಶಮೀಂದ್ರತೀರ್ಥ ಸ್ವಾಮೀಜಿ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡು ಬಂತು. ಶ್ರೀರಾಘವೇಂದ್ರರ ಪೂಜೆ ಮತ್ತು ಮೂಲರಾಮನ ಪೂಜೆಗೆ ತೊಂದರೆಯಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಸುಶಮೀಂದ್ರತೀರ್ಥ ಸ್ವಾಮೀಜಿ ಅವರು ಸುಶೀಲೇಂದ್ರಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನೇಮಿಸಿದರು. ಈ ವೇಳೆ ಆಚಾರ್ಯರನ್ನು ಸುಯತೀಂದ್ರತೀರ್ಥ ಶ್ರೀಗಳಾಗಿ ನಾಮಕರಣ ಮಾಡಲಾಯಿತು.
ಸುಯತೀಂದ್ರಶ್ರೀಗಳು ಮಂತ್ರಾಲಯ ಮಠವನ್ನು ಬೆಳೆಸುವಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 2009ರಲ್ಲಿ ಸುರಿದ ಮಹಾನೆರೆಯಿಂದಾಗಿ ಮಠಕ್ಕೆ ಆದ ಹಾನಿ ಸ್ವಾಮೀಜಿಗಳನ್ನು ತೀವ್ರ ಕಾಡಿತ್ತು. ಆದರೂ ಅವರು ಜೋಳಿಗೆ ಹಿಡಿದು ಮಠದ ಮೂಲವೈಭವವನ್ನು ಮರುಸ್ಥಾಪಿಸಿದರು.
ಪರಂಪರೆಯ ಪಾವನ ಪೀಠದಲ್ಲಿ...
ಹಂಸನಾಮಕ ಪರಮಾತ್ಮನಿಂದ ಪ್ರಣೀತವಾದ ವೈದಿಕ ವೈಷ್ಣವ ಸಿದ್ಧಾಂತನ್ನು ಪುನರುತ್ಥಾನಗೊಳಿಸಿದ ಜಗದ್ಗುರು ಮಧ್ವಾಚಾರ್ಯರರು ರಚಿಸಿ ದೈತ ಸಿದ್ಧಾಂತ ಮತವನ್ನು ಪ್ರತಿಷ್ಠಾಪಿಸಿದರು. ಶ್ರೀಮದ್ ಆಚಾರ್ಯರು ತಾವು ಪ್ರಚುರಗೊಳಿಸಿದ ಸಿದ್ಧಾಂತ ಪ್ರಚಾರಕ್ಕಾಗಿ ಮೂಲ ಸಂಸ್ಥಾನವನ್ನು ತಮ್ಮ ನಂತರ ಪದ್ಮನಾಭತೀರ್ಥರಿಗೆ ವಹಿಸಿದರು. ಶ್ರೀ ಪದ್ಮನಾಭತೀರ್ಥರು ತಮ್ಮದೇ ಆದ ಇನ್ನೊಂದು ಮಠ ಸ್ಥಾಪಿಸಿ(ಮುಳಬಾಗಲು ಪಾದರಾಜಮಠ) ಮೂಲ ಸಂಸ್ಥಾನವನ್ನು ನರಹರಿತೀರ್ಥರಿಗೆ ವಹಿಸಿಕೊಟ್ಟರು. ನರಹರಿ ತೀರ್ಥರು ಮೂಲ ಸಂಸ್ಥಾನವನ್ನು ತಮ್ಮ ನಂತರದಲ್ಲಿ ಮಾಧವ ತೀರ್ಥರಿಗೆ ವಹಿಸಿ ಕೊಟ್ಟರು. ಮಾಧವ ತೀರ್ಥರು ತಮ್ಮದೇ ಆದ ಮಠವನ್ನು ಸ್ಥಾಪಿಸಿ(ಮಜ್ಜಿಗೆ ಹಳ್ಳಿ ತಂಬಿಹಳ್ಳಿ ಮಠ) ಮೂಲ ಸಂಸ್ಥಾನದ ಜವಾಬ್ದಾರಿಯನ್ನು ಅಕ್ಷೋಭ್ಯತೀರ್ಥರಿಗೆ ವಹಿಸಿಕೊಟ್ಟರು. ಅಕ್ಷೋಭ್ಯತೀರ್ಥರು ಸಹ ತಮ್ಮದೇ ಆದ ಮಠ ಸ್ಥಾಪಿಸಿ (ಕೂಡ್ಲಿಗೆ ಮತ್ತು ಬಾಳಗಾರು ಅಕ್ಷೋಭ್ಯಮಠ) ಮೂಲ ಸಂಸ್ಥಾನವನ್ನು ಶ್ರಿಮದ್ ಆಚಾರ್ಯರ ಎಲ್ಲ ಗ್ರಂಥಗಳಿಗೆ ಟೀಕೆ ರಚಿಸಿ ಟೀಕಾಚಾರ್ಯರೆಂದು ಪ್ರಸಿದ್ಧರಾದ ಜಯತೀರ್ಥ ಮುನಿಗಳಿಗೆ ವಹಿಸಿಕೊಟ್ಟರು.
ಜಯತೀರ್ಥರಿಂದ ಮೂಲಸಂಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಂಡ ವಿದ್ಯಾಧಿರಾಜರು ಶ್ರೀ ರಾಜೇಂದ್ರತೀರ್ಥರು ಕವೀಂದ್ರತೀರ್ಥರೆಂಬ ಇಬ್ಬರೂ ಯತಿಗಳಿಗೆ ಆಶ್ರಮವಿತ್ತರು. ರಾಜೇಂದ್ರತೀರ್ಥರಿಂದ ಕವಲೊಡೆದ ಮಠವು ಇಂದು ವ್ಯಾಸರಾಜಮಠವೆಂದು ಜಗತ್ಪ್ರಸಿದ್ಧಿ ಹೊಂದಿದೆ. ಶ್ರೀ ಕವೀಂದ್ರ ತೀರ್ಥರಿಂದ ಮುಂದುವರಿದ ಶ್ರೀಮದ್ ಆಚಾರ್ಯರ ಮೂಲ ಮಹಾಸಂಸ್ಥಾನವು ಕವೀಂದ್ರ ತೀರ್ಥರ ನಂತರದಲ್ಲಿ ವಾಗೀಶತೀರ್ಥರು, ರಾಮಚಂದ್ರತೀರ್ಥರು, ವಿಭುದೇಂದ್ರ ತೀರ್ಥರು, ಜೀತಾಮಿತ್ರ ತೀರ್ಥರು, ಸುರೇಂದ್ರ ತೀರ್ಥರು, ವಿಜಯಿಂದ್ರ ತೀರ್ಥರು, ಸುಧೀಂದ್ರ ತೀರ್ಥರುಗಳಿಂದ ಅಲಂಕರಿಸಲ್ಪಟ್ಟಿತು. ಶ್ರೀ ಸುಧೀಂದ್ರ ತೀರ್ಥರು ಬ್ರಹ್ಮದೇವರಿಂದ ವರರೂಪವಾದ ಶಾಪವನ್ನು ಪಡೆದ ಕರ್ಮಜ ದೇವತೆಗಳಾದ ಶಂಕುಕರ್ಣರ ನಾಲ್ಕನೇ ಅವತಾರವಾದ(ಪ್ರಹ್ಲಾದ್, ಬಾಹ್ಲಿಕ, ವ್ಯಾಸರಾಜ ಅವತಾರ ನಂತರ) ರಾಘವೇಂದ್ರ ಸ್ವಾಮೀಜಿಗಳಿಗೆ ಶ್ರೀಮದ್ ಆಚಾರ್ಯರ ಮೂಲ ಸಂಸ್ಥಾನವನ್ನು ವಹಿಸಿಕೊಟ್ಟರು. ಇಂದು ನರಸಿಂಹದೇವರ ಮಹಾನ್ ವರಭಾಜನರಾದ ಕಲಿಯುಗ ಕಲ್ಪತರುಗಳು ಅಶ್ರಿತ ಜನ ಸಂರಕ್ಷಣರು ದೀನ ದಲಿತ ಜನೋದ್ಧಾರಕರು ಶಾಪಾನುಗ್ರಹಶಕ್ತರು ಸಂಪ್ರದಾಯ ಪ್ರವರ್ತಕರು ಮುಂತಾದ ಬಿರುದುಗಳಿಂದ ಭೂಷಿತರಾಗಿ ವಿಶ್ವಗುರುಗಳೆಂದು ಜಗನ್ಮಾನ್ಯರಾಗಿರುವ ಶ್ರೀ ರಾಘವೇಂದ್ರ ಗುರುಗಳ ನಂತರದಲ್ಲಿ ಮಧ್ವಾಚಾರ್ಯರ ಮೂಲ ಮಹಾ ಸಂಸ್ಥಾನವು ರಾಘವೇಂದ್ರ ಸ್ವಾಮಿಗಳ ನಾಮ ಸಮಲಂಕುತವಾಗಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠವೆಂದು ಪ್ರಸಿದ್ಧಿ ಹೊಂದಿದೆ.
ಜಗದ್ಗುರು ರಾಘವೇಂದ್ರ ಸ್ವಾಮಿಗಳ ನಂತರದಲ್ಲಿ ರಾಘವೇಂದ್ರ ಸ್ವಾಮಿ ಮಠದಲ್ಲಿ ಅವರ ಮೌಖಿಕ ಆದೇಶದಂತೆ ಪೂರ್ವಾಶ್ರಮ ವಂಶದ ಅರ್ಹ ವ್ಯಕ್ತಿಗಳು ಪೀಠಾಧಿಪತಿಗಳಾಗುವುದು ಸಂಪ್ರದಾಯ.
ಹೀಗಾಗಿ ರಾಘವೇಂದ್ರ ಸ್ವಾಮಿಗಳವರ ನಂತರದಲ್ಲಿ ಮದ್ವಾಚಾರ್ಯರ ಮೂಲ ಸಂಸ್ಥಾನವನ್ನು ಆಳಿದ ಬಹುತೇಕ ಎಲ್ಲರೂ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮ ವಂಶದವರೇ ಆಗಿರುತ್ತಾರೆ. ರಾಘವೇಂದ್ರ ಸ್ವಾಮಿಗಳಾದ ನಂತರ 8ನೇಯವರಾಗಿ ರಾಘವೇಂದ್ರ ಸ್ವಾಮಿಗಳ ಮೂಲ ಮಹಾ ಸಂಸ್ಥಾನವನ್ನು ಆಳಿದವರು ಅವರ ಪೂರ್ವಾಶ್ರಮ ಜೇಷ್ಠ ಸಂತತಿಯವರಾದ ಧೀರೇಂದ್ರ ಶ್ರೀಪಾದಂಗಳು ಇವರ ಪೂರ್ವಾಶ್ರಮ ಜೇಷ್ಠ ಸಂತತಿಯಲ್ಲಿ ಅನಂತಾಚಾರ್ಯರೆಂಬ ಸಾತ್ವಿಕ ಶಿರೋಮಣಿಗಳಿದ್ದರು. ಇವರ ಪತ್ನಿ ಪದ್ಮಾಮತಿಭಾಯಿ ಶ್ರೀ ಅನಂತಾಚಾರ್ಯ, ಶ್ರೀ ಪದ್ಮಾವತಿಬಾಯಿ ದಂಪತಿಗೆ ನಾಲ್ವರು ಪುತ್ರರು ಹಾಗೂ ಒರ್ವ ಪುತ್ರಿ. ಅವರುಗಳೆಂದರೆ ಧೀರೇಂದ್ರಾಚಾರ್ಯ, ಶ್ರೀನಿವಾಸಾಚಾರ್ಯ, ಗುರುರಾಜಾಚಾರ್ಯ, ಶ್ರೀಮತಿ ಅಂಜವ್ವ ಮತ್ತು ಸುಶೀಲೇಂದ್ರಾಚಾರ್ಯ.