ಮಲೇಷ್ಯಾ ವಿಮಾನ ನಾಪತ್ತೆ: ಇನ್ನೂ ಪತ್ತೆಯಾಗದ ಅವಶೇಷಗಳು
ಎರಡು ವಾರಗಳಿಂದ ನಿಗೂಢವಾಗಿ ನಾಪತ್ತೆ..
ಕೌಲಲಾಂಪುರ: ಎರಡು ವಾರಗಳಿಂದ ನಿಗೂಢವಾಗಿ ನಾಪತ್ತೆಯಾಗಿರುವ ಮಲೇಷ್ಯಾ ವಿಮಾನದ ಶೋಧ ಕಾರ್ಯ ಶುಕ್ರವಾರವೂ ಮುಂದುವರೆದಿದ್ದು, ಇಲ್ಲಿಯವರೆಗೂ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.
ಅಂತಾರಾಷ್ಟ್ರೀಯ ತಂಡವೊಂದು ಇಂದು ಬೆಳಗ್ಗೆಯಿಂದ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದು, ಈವರೆಗೂ ನಾಪತ್ತೆಯಾದ ಎಂಎಚ್ 370 ವಿಮಾನದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ. ಆದರೆ ವಿಮಾನದ ಅವಶೇಷಗಳು ಸಮುದ್ರದ ಒಳಗೆ ಮುಳುಗಿರಬಹುದೆಂದು ಆಸ್ಟ್ರೇಲಿಯಾ ಪ್ರಧಾನಿ ಹೇಳಿದ್ದಾರೆ.
ಭಾರತ ಮತ್ತು ಥೈಲ್ಯಾಂಡ್ ನಡುವೆ ಇರುವ ಅಂಡಮಾನ್ ಸಮುದ್ರದಲ್ಲಿ ವಿಮಾನ ಮತ್ತು ಯುದ್ಧನೌಕೆಗಳು ಶೋಧ ಕಾರ್ಯದಲ್ಲಿ ತೊಡಗಿದ್ದು, ಇನ್ನು ಒಂದು ದಿನ ವಿಮಾನ ಪತ್ತೆ ಕಾರ್ಯ ಮುಂದುವರೆಸುವುದಾಗಿ ಆಸ್ಟ್ರೇಲಿಯಾ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂ ಮಹಾಸಾಗರದಲ್ಲಿ ನಿನ್ನೆ ಉಪಗ್ರಹವೊಂದು ಪತ್ತೆ ಹಚ್ಚಿದ್ದ ಎರಡು ಬಹತ್ ವಸ್ತುಗಳು ನಾಪತ್ತೆಯಾದ ಮಲೇಷ್ಯಾ ವಿಮಾನದ ಅವಶೇಷವೇ ಅಥವಾ ಅಲ್ಲವೇ ಎಂಬುದನ್ನು ಪರಿಶೀಲಿಸಲು ಆಸ್ಟ್ರೇಲಿಯಾ ಸೇನಾ ವಿಮಾನಗಳು ತೆರಳಿದ್ದವು. ಆದರೆ ಅವಶೇಷಗಳನ್ನು ಪತ್ತೆ ಹಚ್ಚುವಲ್ಲಿ ವಿಮಾನಗಳು ವಿಫಲವಾಗಿವೆ.