ಪತ್ರಕರ್ತ ಎಂ.ಜೆ ಅಕ್ಬರ್ ಬಿಜೆಪಿಗೆ ಸೇರ್ಪಡೆ
ಲೇಖಕ ಖ್ಯಾತ ಪತ್ರಕರ್ತ ಎಂ ಜೆ ಅಕ್ಬರ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿ...
ನವದೆಹಲಿ: ಲೇಖಕ ಖ್ಯಾತ ಪತ್ರಕರ್ತ ಎಂ ಜೆ ಅಕ್ಬರ್ ಶನಿವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್ ಅವರ ಉಪಸ್ಥಿತಿಯಲ್ಲಿ ಬಿಜೆಪಿಗೆ ಸೇರ್ಪಡೆಯಾದ ಅಕ್ಬರ್ ತಾನು ಉತ್ತಮ ರಾಜಕಾರಣ ಮಾಡುವುದಕ್ಕಾಗಿಯೇ ರಾಜಕೀಯಕ್ಕೆ ಪ್ರವೇಶಿಸಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ದೇಶದ ಪರಿಸ್ಥಿತಿ ಯಾವ ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ನಮ್ಮ ದೇಶಕ್ಕೆ ನಮ್ಮಿಂದಾದ ಸಹಾಯ ಮಾಡುವುದಕ್ಕೆ ಇದೊಂದು ಅವಕಾಶ ಎಂದು ಅಕ್ಬರ್ ಹೇಳಿದ್ದಾರೆ.
ನಾವು ನಮ್ಮ ದೇಶದ ಅಭಿವೃದ್ಧಿಗೆ ಕೈ ಜೋಡಿಸಿ, ದೇಶವನ್ನು ಸುಸ್ಥಿತಿಗೆ ತರಬೇಕಾಗಿದೆ. ನಾನು ಬಿಜೆಪಿಯೊಂದಿಗೆ ಕೈಜೋಡಿಸುವ ಮೂಲಕ ಮುಂದಿನ ಕೆಲಸ ಮಾಡುತ್ತಿದ್ದೇನೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಹೇಳಿದ್ದಾರೆ.
ಈ ಹಿಂದೆ ಬಿಹಾರದ ಕಿಶನ್ಗಂಜ್ನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಅಕ್ಬರ್ ಸ್ಪರ್ಧಿಸಿದ್ದರು.
ಅಕ್ಬರ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್, ಕ್ರೀಡೆ, ಸಿನಿಮಾ ಹಾಗು ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಪಕ್ಷಕ್ಕೆ ಸೇರಿದ್ದಾರೆ.
ಇದೀಗ ಮಾಧ್ಯಮ ಜಗತ್ತಿನ ಖ್ಯಾತನಾಮರು ಕೂಡಾ ಬಿಜೆಪಿಗೆ ಸೇರುವ ಮೂಲಕ ಸುಸ್ಥಿರ ಸರ್ಕಾರ ರಚನೆಗೆ ಸಹಾಯ ಮಾಡುತ್ತಿದ್ದಾರೆ. ಮಾಧ್ಯಮರಂಗದಲ್ಲಿ ಅನುಭವೀ ಪತ್ರಕರ್ತರಾಗಿರುವ ಅಕ್ಬರ್ ಅವರನ್ನು ನಾನು ಪಕ್ಷಕ್ಕೆ ಸ್ವಾಗತಿಸುತ್ತಿದ್ದೇನೆ ಎಂದು ರಾಜ್ನಾಥ್ ಸಿಂಗ್ ಹೇಳಿದ್ದಾರೆ.