ಬಿಜೆಪಿಯಲ್ಲಿ ಡ್ಯುಪ್ಲಿಕೇಟ್ ರಾಜಕಾರಣಿಗಳದ್ದೇ ಪ್ರಾಬಲ್ಯ: ಜಸ್ವಂತ್ ಸಿಂಗ್
ಟಿಕೆಟ್ ಸಿಗದೆ ಅಸಮಾಧಾನಗೊಂಡು ಬಿಜೆಪಿ ತೊರೆಯಲು ನಿರ್ಧರಿಸಿರುವ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ...
ನವದೆಹಲಿ:ಟಿಕೆಟ್ ಸಿಗದೆ ಅಸಮಾಧಾನಗೊಂಡು ಬಿಜೆಪಿ ತೊರೆಯಲು ನಿರ್ಧರಿಸಿರುವ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಯಾವುದೇ ನಾಯಕರ ಹೆಸರನ್ನು ಉಲ್ಲೇಖಿಸದೆ ಪಕ್ಷದ ವಿರುದ್ಧ ಕಿಡಿ ಕಾರಿದ ಸಿಂಗ್, ಪಕ್ಷ ನನ್ನ ಜತೆ ಇದೇ ರೀತಿ ವರ್ತಿಸಿರುವುದು ಇದು ಎರಡನೇ ಬಾರಿ. ಆದ್ದರಿಂದ ಇನ್ಯಾವುದೇ ರೀತಿಯ ಹೊಂದಾಣಿಕೆಗೆ ನಾನು ಒಪ್ಪಲ್ಲ ಎಂದಿದ್ದಾರೆ.
ಭಾನುವಾರ ಬರ್ಮರ್‌ಗೆ ಜಸ್ವಂತ್ ಸಿಂಗ್ ಆಗಮಿಸಲಿದ್ದು, ಮುಂದಿನ ಯೋಜಚನೆಗಳ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.
ನಾನು ಬರ್ಮರ್‌ಗೆ ತಲುಪಿದ ನಂತರವೇ ಮುಂದಿನ ಯೋಜನೆಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಂಗ್ ಹೇಳಿದ್ದಾರೆ.
ಏತನ್ಮಧ್ಯೆ, ಇದೀಗ ಬಿಜೆಪಿ ಎರಡು ಗುಂಪುಗಳಾಗಿ ಪರಿವರ್ತಿತವಾಗಿದೆ. ಒಂದು ಗುಂಪು ಸತ್ಯ, ಇನ್ನೊಂದು ಸುಳ್ಳು ಅಥವಾ ಒಂದು ಒರಿಜಿನಲ್ ಇನ್ನೊಂದು ಡ್ಯುಪ್ಲಿಕೇಟ್ ಎಂದು ಹೇಳಿದ ಸಿಂಗ್ ದುರದೃಷ್ಟವಾತ್ ಡ್ಯುಪ್ಲಿಕೇಟ್ ರಾಜಕಾರಣಿಗಳೇ ಈಗ ಪಕ್ಷದಲ್ಲಿ ಪ್ರಾಬಲ್ಯ ಮೆರೆದಿದ್ದಾರೆ ಎಂದು ಹೇಳಿದ್ದಾರೆ.
ನಾಳೆ ಬಿಜೆಪಿಗೆ ರಾಜಿನಾಮೆ ಸಾಧ್ಯತೆ?
ಬಿಜೆಪಿ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ನಾಳೆ ಪಕ್ಷಕ್ಕೆ ರಾಜಿನಾಮೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಬಿಜೆಪಿ ಮೂಲಗಳಿಂದಲೇ ಮಾಧ್ಯಮಗಳಿಗೆ ಮಾಹಿತಿ ಲಭಿಸಿದೆ. ಜಸ್ವಂತ್ ಸಿಂಗ್ ಅವರಿಗೆ ಬರ್ಮರ್ ಲೋಕಸಭಾ ಕ್ಷೇತ್ರದಲ್ಲಿ ಟಿಕೆಟ್ ನೀಡದೇ ಇರುವ ಕಾರಣದಿಂದ ಬೇಸರಗೊಂಡು ಅವರು ಪಕ್ಷ ತೊರೆಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ತನ್ನ ತವರೂರಾದ ರಾಜಸ್ತಾನದ ಬರ್ಮರ್‌ನಲ್ಲಿ ಕಣಕ್ಕಿಳಿಯಲು 76ರ ಹರೆಯದ ಜಸ್ವಂತ್ ಸಿಂಗ್ ಆಗ್ರಹಿಸಿದ್ದರು. ಆದರೆ ಬಿಜೆಪಿ ಅವರ ಆಗ್ರಹವನ್ನು ಕಡೆಗಣಿಸಿ, ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ನಿವೃತ್ತ ಕರ್ನಲ್ ಸೋನಾ ರಾಮ್ ಚೌಧರಿ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಜಸ್ವಂತ್ ಸಿಂಗ್ ತುಂಬಾ ಹಿರಿಯರು. ನಾವು ಅವರಿಗೆ ಸಾಂತ್ವನ ಹೇಳುತ್ತೇವೆ ಎಂದು ಅಭ್ಯರ್ಥಿ ಘೋಷಣೆಯ ನಂತರ ಮಾತನಾಡಿದ ಚೌಧರಿ ಹೇಳಿದ್ದರು.
ಏತನ್ಮಧ್ಯೆ, ಬರ್ಮರ್ ನಿಂದ ತಾನು ಸ್ವತಂತ್ರಅಭ್ಯರ್ಥಿಯಾಗಿ ಭಾಗವಹಿಸುವುದಾಗಿ ಸಿಂಗ್ ಹೇಳಿದ್ದರು ಎನ್ನಲಾಗುತ್ತಿದೆ.
ಬರ್ಮರ್ ನಲ್ಲಿ ಜಾತ್ ಸಮುದಾಯ ಪ್ರಾಬಲ್ಯವಿರುವುದರಿಂದ ಜಾತ್ ಸಮುದಾಯಕ್ಕೆ ಸೇರಿದ್ದ ಚೌಧರಿ ಅವರನ್ನೇ ಕಣಕ್ಕಿಳಿಸಬೇಕೆಂದು ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಒತ್ತಡ ಹೇರಿದ್ದರು. ಸಿಂಗ್ ಠಾಕುರ್ ಸಮುದಾಯಕ್ಕೆ ಸೇರಿರುವುದರಿಂದ ಅಲ್ಲಿ ಜಾತ್ ಸಮುದಾಯದವರಿಗೆ ಟಿಕೆಟ್ ಕೊಡಲಾಯಿತು ಎಂದು ಹೇಳಲಾಗುತ್ತಿದೆ.
ಆದಾಗ್ಯೂ, ಕಾಂಗ್ರೆಸ್‌ನಿಂದ ಬಂದ ಅಭ್ಯರ್ಥಿಗೆ ಬಿಜೆಪಿ ಮಣೆಹಾಕಿರುವುದಕ್ಕೆ ಅಸಮಾಧಾನಗೊಂಡಿರುವ ಜಸ್ವಂತ್ ನಾಳೆ ಪಕ್ಷವನ್ನು ತೊರೆಯಲಿದ್ದಾರೆ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುವ ಸದ್ಯದ ಸುದ್ದಿ.