ರಕ್ಷಣಾ ಇಲಾಖೆ ಭೂಮಿ ಅತಿಕ್ರಮಣ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ: ರಾಷ್ಟ್ರಾದ್ಯಂತ ರಕ್ಷಣಾ ಇಲಾಖೆಯ ಭೂಮಿಯನ್ನು ಅತಿಕ್ರಮಿಸಿರುವ ಹಾಗೂ ದುರ್ಬಳಕೆ ಮಾಡಿಕೊಂಡ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಹಾಗೂ ನ್ಯಾಯಮೂರ್ತಿ ರಂಜನ್‌ಗೋಗೊಯ್ ಅವರ ಪೀಠ, ಈ ಸಂಬಂಧ ಪ್ರತಿಕ್ರಿಯಿಸುವಂತೆ ಸರ್ಕಾರ ಹಾಗೂ ರಕ್ಷಣಾ ಇಲಾಖೆಯ ಆಸ್ತಿಗಳ ಪ್ರಧಾನ ನಿರ್ದೇಶಕರಿಗೆ ನೋಟಿಸ್ ನೀಡಿತು.
ರಕ್ಷಣಾ ಇಲಾಖೆಯ ಭೂಮಿಯ ಅತಿಕ್ರಮಣದ ಬಗ್ಗೆ ಮಹಾಲೆಕ್ಕ ಪರಿಶೋಧಕರು (ಸಿಎಜಿ) ಹಲವು ವರದಿಗಳಲ್ಲಿ ಬೆಳಕು ಚೆಲ್ಲಲಾಗಿದೆ’ ಎಂದು ಎನ್‌ಜಿಒ ಪರ ಹಾಜರಾದ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರು ಕೋರ್ಟ್ ಗಮನಕ್ಕೆ ತಂದರು.
ಅಲ್ಲದೇ, 17.31 ಲಕ್ಷ ಎಕರೆ ಭೂಮಿಯನ್ನು ರಕ್ಷಣಾ ಸಚಿವಾಲಯ ಹೊಂದಿದೆ. ಅದರಲ್ಲಿ ಸುಮಾರು 1.57 ಲಕ್ಷ ಎಕರೆ ಭೂಮಿ 62 ಪ್ರತಿಷ್ಠಿತ ಕಂಟೋನ್ಮೆಂಟ್‌ಗಳ ಒಳಗಿದೆ. ಉಳಿದ ಸುಮಾರು 15.96 ಲಕ್ಷ ಎಕರೆ ಭೂಮಿ ಈ ಕಂಟೋನ್ಮೆಂಟ್‌ಗಳ ಹೊರಗಿದೆ’ ಎಂದು ಭೂಷಣ್ ಹೇಳಿದರು.
ರಕ್ಷಣಾ ಇಲಾಖೆಯ ಭೂಮಿಯನ್ನು ದುರ್ಬಳಕೆ ಸುಕ್ನಾ, ಆದರ್ಶ ಸೊಸೈಟಿ ಸೇರಿದಂತೆ ಹಲವು ಹಗರಣಗಳಿಗೆ ಕಾರಣವಾಗಿದೆ ಎಂದು ಆರೋಪಿಸಿ ಸರ್ಕಾರೇತರ ಸಂಘಟನೆ (ಎನ್‌ಜಿಒ ) ಅರ್ಜಿ ಸಲ್ಲಿಸಿತ್ತು.