ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಡಿಎಂಕೆಯಿಂದ ಅಳಗಿರಿ ಶಾಶ್ವತ ಗಡಿಪಾರು

ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಡಿಎಂಕೆ ಪಕ್ಷದಿಂದ...

Vishwanath S
Updated On : 25 Mar 2014, 5:40 am

ಚೆನ್ನೈ: ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಡಿಎಂಕೆ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾ ಎಂ.ಕೆ.ಅಳಗಿರಿಯನ್ನು ಮಂಗಳವಾರ ಪಕ್ಷದಿಂದ ಅಧಿಕೃತವಾಗಿ ಉಚ್ಛಾಟಿಸಲಾಗಿದೆ.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ಎಂ.ಕೆ.ಅಳಗಿರಿಗೆ ಡಿಎಂಕೆ ನೋಟಿಸ್ ನೀಡಿತ್ತು. ಈ  ನೋಟಿಸ್ ಗೆ ಅಳಗಿರಿ ಉತ್ತರ ನೀಡದ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಎಂ.ಕೆ.ಕರುಣಾನಿಧಿಯವರು ಅಳಗಿರಿಯನ್ನು ಪಕ್ಷದಿಂದ ಉಚ್ಛಾಟಿಸಿ ಆದೇಶ ಹೊರಡಿಸಿದ್ದಾರೆ.

ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರ ಕುಟುಂಬದಲ್ಲಿನ ಬಿರುಕು ಸ್ಪಷ್ಟವಾಗಿ ಗೋಚರಿಸಿದೆ. ಹಲವಾರು ವರ್ಷಗಳಿಂದ ಕರುಣಾನಿಧಿಯವರ ಹಿರಿಯ ಮಗ ಎಂ.ಕೆ.ಅಳಗಿರಿ ಹಾಗೂ ಕಿರಿಯ ಮಗ ಎಂ.ಕೆ.ಸ್ಟಾಲಿನ್ ನಡುವೆ ಶೀತಲ ಸಮರ ನಡೆಯುತ್ತಲೇ ಇತ್ತು. ಕಿರಿಯ ಮಗನಿಗೇ ರಾಜಕೀಯದಲ್ಲಿ ಹೆಚ್ಚು ಪ್ರಾಧಾನ್ಯತೆ ಸಿಗುತ್ತಿದೆ ಎಂದು ಅಳಗಿರಿಗೆ ಮೊದಲಿಂದಲೂ ಅಸಮಾಧಾನ ಇತ್ತು.

ಈ ಬಾರಿಯ ಲೋಕಸಭಾ ಚುನಾವಣೆ ವೇಳೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಅಳಗಿರಿ ಅಕ್ಷರಶಃ ಕೆಂಡಕಾರಿದ್ದರು. ತಮಿಳುನಾಡಿನ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸ್ಟಾಲಿನ್ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುತ್ತಿದೆ ಎಂದು ಬಹಿರಂಗವಾಗಿ ಬಂಡೆದಿದ್ದರು. ಅಷ್ಟೇ ಅಲ್ಲದೆ, ನರೇಂದ್ರ ಮೋದಿಗೆ ಬೆಂಬಲ ನೀಡುವ ಮಾತುಗಳನ್ನೂ ಆಡಿದ್ದರು. ಹೀಗಾಗಿ, ಅಳಗಿರಿಯನ್ನು ಪಕ್ಷದಿಂದ ಹೊರಹಾಕುವುದು ಕರುಣಾನಿಧಿಗೆ ಅನಿವಾರ್ಯವೇ ಆಗಿತ್ತು.

ಅಳಗಿರಿಯ ಮುಂದಿನ ದಾರಿ?
ಅಳಗಿರಿ ಈಗಾಗಲೇ ನರೇಂದ್ರ ಮೋದಿ ಪರವಾಗಿ ಮಾತನಾಡಿರುವುದರಿಂದ ಅವರು ಬಿಜೆಪಿ ಜೊತೆ ಸಖ್ಯ ಬೆಳೆಸುವ ಸಾಧ್ಯತೆ ಇದೆ. ಪ್ರತ್ಯೇಕ ಪಕ್ಷ ರಚನೆ ಮಾಡಿ ತೃತೀಯ ರಂಗ ಅಥವಾ ಎನ್'ಡಿಎ ಒಕ್ಕೂಟಕ್ಕೆ ಬೆಂಬಲ ನೀಡಬಹುದು.

ಇದಕ್ಕೂ ಮುನ್ನ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಅವರು ಅಳಗಿರಿಯನ್ನು ಭೇಟಿ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿದ್ದರು.

ತಮಿಳುನಾಡಿನ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಅಳಗಿರಿ ತನ್ನ ವೈಯಕ್ತಿಕ ವರ್ಚಸ್ಸಿನಿಂದ ಮೂರ್ನಾಲ್ಕು ಸೀಟನ್ನಾದರೂ ಗೆಲ್ಲುವ ಸಾಧ್ಯತೆಯಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement