ಪ್ರಹ್ಲಾದ್ ಜೋಷಿ ವಿರುದ್ಧ ಸ್ಪರ್ಧೆಗೆ ಮುತಾಲಿಕ್ ನಿರ್ಧಾರ
ಬಿಜೆಪಿ ಸೇರಿ ಅದೇ ದಿನ ಹೊರ ದಬ್ಬಿಸಿಕೊಂಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿಗೆ ಸೆಡ್ಡು ಹೊಡೆದಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಿರುದ್ಧ ಧಾರವಾಡ...
ಹುಬ್ಬಳ್ಳಿ: ಬಿಜೆಪಿ ಸೇರಿ ಅದೇ ದಿನ ಹೊರ ದಬ್ಬಿಸಿಕೊಂಡಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿಗೆ ಸೆಡ್ಡು ಹೊಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ವಿರುದ್ಧ ಧಾರವಾಡ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದು, ನಾಳೆ ಮಧ್ಯಾಹ್ನ 1 ಗಂಟೆಗೆ ಪಕ್ಷೇತರನಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ನನಗೆ ಅನ್ಯಾಯವಾಗಿದ್ದು, ನನಗೆ ತೀರ ಅಪಮಾನವಾಗಿದೆ. ಬಿಜೆಪಿ ನಾಯಕರ ಭ್ರಷ್ಟಾಚಾರದ ಪುರಾವೆಗಳು ನನ್ನ ಬಳಿ ಇವೆ. ಸೂಕ್ತ ಸಮಯದಲ್ಲಿ ಅವುಗಳನ್ನು ಬಹಿರಂಗ ಪಡಿಸುವ ಬಾಂಬ್ ಸಿಡಿಸಿದ್ದಾರೆ.
ಈ ವೇಳೆ ಬಿಜೆಪಿ ಹಿರಿಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜ್ನಾಥ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಮುತಾಲಿಕ್, ಅನಂತ್ ವಿರುದ್ಧವೂ ಸ್ಪರ್ಧೆಗೆ ಚಿಂತನೆ ನಡೆಸಲಾಗಿದೆ ಎಂದರು. ಬಿಜೆಪಿಯೊಂದಿಗೆ ಸಂಧಾನ ಮುಗಿದು ಹೋದ ಅಧ್ಯಾಯ. ಬಿಜೆಪಿ ನನ್ನ ವಿರುದ್ಧ ಅಸಹ್ಯವಾಗಿ ಮಾತನಾಡುತ್ತಿದೆ. ಹೀಗಾಗಿ ಇನ್ನು ಎಂದಿಗೂ ಬಿಜೆಪಿಗೆ ಹಿಂದಿರುಗುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿಯಿಂದ ಕಿಕ್ಔಟ್ ಆದ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಬಿಜೆಪಿ ನಾಯಕರಿಗೆ ಇಂದು ಮಧ್ಯಾಹ್ನದವರೆಗೆ ಡೆಡ್ಲೈನ್ ನೀಡಿದ್ದರು. ಆದರೆ ಬಿಜೆಪಿ ಹೈಕಮಾಂಡ್ನಿಂದ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬೆಂಬಲಿಗರ ಜೊತೆ ಸಮಾಲೋಚನೆ ನಡೆಸಿ ಪಕ್ಷೇತರನಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.