ವಾರಣಾಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧೆ: ಸವಾಲು ಸ್ಪೀಕರಿಸಿದ ಕೇಜ್ರಿವಾಲ್
ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ...
ವಾರಣಾಸಿ: ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸುವುದಾಗಿ ಮಂಗಳವಾರ ಹೇಳಿದ್ದಾರೆ.
ವಾರಣಾಸಿಗೆ ಇಂದು ಭೇಟಿ ನೀಡಿ ಪಕ್ಷದ ಬೆಂಬಲಿಗರ ರ್ಯಾಲಿ ನಡೆಸಿದ ನಂತರ ಮಾತನಾಡಿದ ಅವರು, ಮೋದಿ ವಿರುದ್ಧ ಸ್ಪರ್ಧಿಸುವ ಸವಾಲನ್ನು ತಾವು ಸ್ವೀಕರಿಸಿದ್ದು, ಬಿಜೆಪಿ ಪ್ರಧಾನಿ ಅಭ್ಯರ್ಥಿಯನ್ನು ಸೋಲಿಸುವುದಾಗಿ ಶಪಥ ಮಾಡಿದ್ದಾರೆ.
ಬಿಜೆಪಿ ಹಾಗೂ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿ ಬೆಂಬಲಿಗರು ನನ್ನ ಮೇಲೆ ದಾಳಿ ನಡೆಸಿದ್ದು ಖಂಡನೀಯ. ವಾರಣಾಸಿಯ ಮತದಾರರು ಮೋದಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಆಪ್ ರ್ಯಾಲಿಗೆ ಮೋದಿ ಬೆಂಬಲಿಗರು ತಡೆಯೊಡ್ಡುತ್ತಿದ್ದಾರೆ. ಹಾಗೆಯೇ ದೇಶಾದ್ಯಂತ ರ್ಯಾಲಿ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರಿಗೂ ಮೋದಿ ಬೆಂಬಲಿಗರು ತಡೆಯೊಡ್ಡುತ್ತಾರಾ ಎಂದು ಪ್ರಶ್ನಿಸಿದರು.
ಗುಜರಾತ್ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಮೋದಿ ಜಪ ಮಾಡುತ್ತಿದ್ದಾರೆ. ಗುಜರಾತ್‌ನಲ್ಲಿ ರೈತರು ಸಾಯುತ್ತಿದ್ದಾರೆ. ಅಭಿವೃದ್ಧಿಯೆಂದರೆ ಇದೇನಾ? ಎಂದು ಕೇಜ್ರಿವಾಲ್ ಪ್ರಶ್ನಿಸಿದರು. ಭವಿಷ್ಯದಲ್ಲಿ ಮೋದಿ ಪ್ರಧಾನಿಯಾದರೆ ಮತ್ತಷ್ಟು ರೈತರು ಸಾಯುತ್ತಾರೆ. ಸಂಸತ್ತಿಗೆ ಆಯ್ಕೆಯಾಗಲು ಮೋದಿ ಸುರಕ್ಷಿತ ಸ್ಥಳ ಆಯ್ಕೆ ಮಾಡಿಕೊಂಡಿದ್ದಾರೆ. ಅದರಂತೆ ನಾನು ಸುರಕ್ಷಿತ ಪ್ರದೇಶವನ್ನು ಆರಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ ಮೋದಿ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂದರು.
ಮೋದಿ ಭ್ರಷ್ಟರ ಜೊತೆ ಸೇರಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿಕೊಂಡು ಬಿಜೆಪಿ ಟಿಕೆಟ್ ನೀಡಿದ್ದಾರೆ ಎಂದು ಆರೋಪಿಸಿದ ಕೇಜ್ರಿವಾಲ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿರುವುದನ್ನು ಪ್ರಸ್ತಾಪಿಸಿದರು. ಮೋದಿ ದೇಶದ ಪ್ರಧಾನಿಯಾದರೆ ಯಡಿಯೂರಪ್ಪ ಟೆಲಿಕಾಂ ಖಾತೆ ಸಚಿವರಾದರೆ, ಶ್ರೀರಾಮುಲು ಗಣಿ ಸಚಿವರಾಗಲಿದ್ದಾರೆ ಎಂದು ಲೇವಡಿ ಮಾಡಿದರು.
ಇಂದು ಬೆಳಗ್ಗೆ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ದರ್ಶನದ ಬಳಿಕ ಕೆಲ ಮೋದಿ ಬೆಂಬಲಿಗರು ಕೇಜ್ರಿವಾಲ್ ಮೇಲೆ ಮೊಟ್ಟೆ ಮತ್ತು ಮಸಿ ಎರಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮತ್ತೊಂದೆಡೆ ರ್ಯಾಲಿಯಲ್ಲಿ ಭಾಗವಹಿಸಿದ್ದ ಕೇಜ್ರಿವಾಲ್ ಮೇಲೆ ಮೋದಿ ಬೆಂಬಲಿಗರು ಇಂಕ್ ಎರಚಿ ಆಕ್ರೋಶ ವ್ಯಕ್ತಪಡಿಸಿದರು.