ಆಂಟನಿ, ಕೇಜ್ರಿವಾಲ್ ಪಾಕಿಸ್ತಾನ ಏಜೆಂಟರು: ಮೋದಿ ಟೀಕೆ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು...
ಜಮ್ಮು-ಕಾಶ್ಮೀರ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬುಧವಾರ ರಕ್ಷಣಾ ಸಚಿವ ಎ.ಕೆ. ಆಂಟನಿ ಮತ್ತು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹಾರಿಹಾಯ್ದಿದ್ದು, ಆಂಟಿನಿ ಮತ್ತು ಕೇಜ್ರಿವಾಲ್ 'ಪಾಕಿಸ್ತಾನದ ಏಜೆಂಟ್, ಭಾರತಕ್ಕೆ ಶತ್ರು' ಎಂದು ಆರೋಪಿಸಿದ್ದಾರೆ.
ಇಂದು ಬಿಜೆಪಿಯ ಭಾರತ ವಿಜಯ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಆಂಟನಿ ಮತ್ತು ಕೇಜ್ರಿವಾಲ್ರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು. ಮೂರು ಎಕೆಗಳು ಸೇರಿ ಪಾಕಿಸ್ತಾನವನ್ನು ಅನ್ಯ ಶಕ್ತಿಯಾಗಿ ಹೊರಹೊಮ್ಮಿಸಿವೆ ಎಂದು ಕಿಡಿಕಾರಿದರು.
ಪಾಕಿಸ್ತಾನಿಗಳು ಎಕೆ-47 ಬಂದೂಕನ್ನು ಬಳಸಿಕೊಂಡು ಕಾಶ್ಮೀರದಲ್ಲಿ ರಕ್ತಧೋಕುಳಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಎ.ಕೆ. ಆಂಟನಿ ಅವರು ಪಾಕಿಸ್ತಾನಕ್ಕೆ ಏಜೆಂಟರಂತೆ ವರ್ತಿಸುತ್ತಿದ್ದು, ಕಾಶ್ಮೀರದ ಗಡಿಯಲ್ಲಿ ಐವರು ಭಾರತೀಯ ಯೋಧರ ಹತ್ಯೆ ಮಾಡಿದ ಸಂದರ್ಭದಲ್ಲಿ, ಪಾಕಿಸ್ತಾನ ಯೋಧರ ಸಮವಸ್ತ್ರ ಧರಿಸಿ ಭಯೋತ್ಪಾದಕರು ದಾಳಿ ನಡೆಸಿದ್ದರು ಎಂದು ಸಂಸತ್ತ್ನಲ್ಲಿ ಹೇಳಿಕೆ ನೀಡಿದ್ದರು. ಇದರಿಂದ ಯಾರಿಗೆ ಪ್ರಯೋಜನ ಎಂದು ಮೋದಿ ಪ್ರಶ್ನಿಸಿದ್ದಾರೆ.
ಇದೀಗ ತಾನೆ ಹೊಸ ಪಕ್ಷವಾಗಿ ಅಸ್ಥಿತ್ವಕ್ಕೆ ಬಂದಿರುವ ಎಎಪಿ ಪಕ್ಷದ ಮುಖ್ಯಸ್ಥ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೂರನೇಯ ಎಕೆ-49 ಆಗಿ ಪಾಕಿಗಳ ಏಜೆಂಟರಾಗಿದ್ದಾರೆ ಎಂದು ಕಟುವಾಗಿ ನುಡಿದಿದ್ದಾರೆ.
ಇದೇ ವೇಳೆ, ಕಾಶ್ಮೀರ ಕಣಿವೆಯಲ್ಲಿ ಹಿಂದಿನ ಎನ್ಡಿಎ ಸರ್ಕಾರ ಕೈಗೊಂಡಿದ್ದ ಕ್ರಮಗಳನ್ನು ಕಾಶ್ಮೀರದ ಪಕ್ಷಗಳು ಶ್ಲಾಘಿಸುತ್ತಿರುವ ಹಿನ್ನೆಲಯಲ್ಲಿ ಕಾಶ್ಮೀರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಜಾರಿಗೆ ತಂದಿದ್ದ ನೀತಿಗಳನ್ನು ಮುಂದುವರೆಸುವುದಾಗಿ ಮೋದಿ ಭರವಸೆ ನೀಡಿದರು.
ವಾಜಪೇಯಿ ಅವರು ತೋರಿದ ಮಾನವತೆ, ಪ್ರಜಾಸತ್ತೆ ಮತ್ತು ಕಾಶ್ಮೀರತ್ವದ ಮಾರ್ಗದಲ್ಲಿ ನಾವು ಮುನ್ನಡೆಯುತ್ತೇವೆ ಎಂದು ಮೋದಿ ಹೇಳಿದರು. ವಾಜಪೇಯಿ ಅವರು ಸರ್ಕಾರಕ್ಕೆ ಇನ್ನೈದು ವರ್ಷಗಳ ಕಾಲಾವಕಾಶ ಲಭಿಸಿದ್ದರೆ ಕಾಶ್ಮೀರದ ಸಮಸ್ಯೆಗಳು ತೀರುತ್ತಿತ್ತು ಎಂದರು.
ಭಾರತ್ ವಿಜಯ್ ಯಾತ್ರೆಯ ಆರಂಭಕ್ಕೆ ಮುನ್ನ ಮೋದಿ ಕತ್ರಾದ ತ್ರಿಕೂಟ ಪರ್ವತದಲ್ಲಿರುವ ಮಾತಾ ವೈಷ್ಣೋದೇವಿ ಮಂದಿರಕ್ಕೆ ತೆರಳಿ ಅಲ್ಲಿ ಶ್ರೀದೇವಿಯ ದರ್ಶನ ಮತ್ತು ಆಶೀರ್ವಾದ ಪಡೆದರು.