ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಎದುರಾಳಿಗಳ ಆರೋಪ 'ಆಧಾರ್‌'ರಹಿತ

ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂದು ಹೇಳಿರಲಿಲ್ಲ: ನಂದನ್ ನಿಲೇಕಣಿ

Lingaraj Badiger
Updated On : 26 Mar 2014, 11:39 am

ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂದು ಹೇಳಿರಲಿಲ್ಲ: ನಂದನ್ ನಿಲೇಕಣಿ

ಕನ್ನಡಪ್ರಭವಾರ್ತೆ ಬೆಂಗಳೂರು ಮಾ. 25

ನನ್ನ ರಾಜಕೀಯ ಎದುರಾಳಿಗಳು ಆಧಾರ್ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು, ಸರ್ಕಾರಿ ವ್ಯವಸ್ಥೆಯಲ್ಲಿನ ಸೋರಿಕೆ ಮತ್ತು ನಕಲಿ ಹಾವಳಿ ತಡೆಯುವ ಉದ್ದೇಶದಿಂದ ಕೆಲವು ಸರ್ಕಾರಿ ಇಲಾಖೆಗಳಲ್ಲಿ ಆಧಾರ್ ಕಡ್ಡಾಯಗೊಳಿಸಲಾಗಿತ್ತು ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನೀಲೇಕಣಿ ಹೇಳಿದ್ದಾರೆ.
ಈ ಬಗ್ಗೆ ಲಿಖಿತ ಸ್ಪಷ್ಟನೆ ನೀಡಿರುವ ಅವರು, ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯ ಎಂದು ಯುಐಡಿಎಐ ಎಂದೂ ಹೇಳಿರಲಿಲ್ಲ. ಇದೆಲ್ಲವೂ ನಮ್ಮ ವಿರೋಧಿಗಳು ಹಬ್ಬಿಸುತ್ತಿರುವ ಸುಳ್ಳು ಸುದ್ದಿ ಹಾಗೂ ತಪ್ಪು ಕಲ್ಪನೆ ಎಂದು ಹೇಳಿದ್ದಾರೆ. ಆದರೆ ನಡೆಸಲಾಗಿರುವ ಕುಟುಕು ಕಾರ್ಯಾಚರಣೆ ಬಗ್ಗೆ ಅವರು ಏನನ್ನೂ ಹೇಳಿಲ್ಲ. ಕುಟುಕು ಕಾರ್ಯಾಚರಣೆಯಲ್ಲಿನ ಜ್ವಲಂತ ಉದಾಹರಣೆಗಳ ಕುರಿತು ಅವರು ಜಾಣ ಮೌನ ಮೆರೆದಿದ್ದಾರೆ.
ಆಧಾರ್ ಪ್ರಾಧಿಕಾರ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುಂಬೈ ಹೈಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಏಕೆಂದರೆ ಆಧಾರ್ ಪ್ರಾಧಿಕಾರ ಯಾವುದೇ ನಿವಾಸಿಯ ಮಾಹಿತಿಯನ್ನು ಏಜೆನ್ಸಿ, ಇಲಾಖೆ ಹಾಗೂ ಅಪರಾಧ ತನಿಖೆಗಾಗಿ ಹಂಚಿಕೊಳ್ಳಲು ಬಯಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಧಾರ್ ನಿಲುವನ್ನು ಎತ್ತಿ ಹಿಡಿದಿದೆ. ದೇಶದ ನಿವಾಸಿಗಳ ಮಾಹಿತಿ ಹಾಗೂ ಖಾಸಗೀತನವನ್ನು ಯುಐಡಿಎಐ ಸದಾ ಗೌರವಿಸುತ್ತದೆ ಎಂದಿದ್ದಾರೆ.
ಆಧಾರ್‌ಗೆ 50 ಸಾವಿರ ಕೋಟಿ ಖರ್ಚು ಮಾಡಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಯುಐಡಿಎಐ ತನ್ನ ಆಯವ್ಯಯದಲ್ಲಿ ಇದಕ್ಕೆ 3800 ಕೋಟಿ ಖರ್ಚು ಮಾಡಲಾಗಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಇದು ಬಿಬಿಎಂಪಿಯ ಆಯವ್ಯಯದ ಅರ್ಧದಷ್ಟಾಗುತ್ತದೆ. ಆದರೆ ಮುಂಬರುವ ದಿನಗಳಲ್ಲಿ ಈ ಯೋಜನೆಯಿಂದ 30 ಸಾವಿರ ಕೋಟಿ ಸರ್ಕಾರಿ ಹಣ ಉಳಿಸಬಹುದು ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನಿ ಉಗ್ರರಿಗೆ ಆಧಾರ್ ನೀಡಲಾಗಿದೆ ಎಂಬುದು ಇನ್ನೊಂದು ತಪ್ಪು ಹೇಳಿಕೆ. ಆಧಾರ್ ಡಾಟಾ ಬೇಸ್‌ನ್ನು ಭದ್ರವಾಗಿ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿ ಇಡಲಾಗಿದೆ. ಅದನ್ನು ಕದಿಯುವುದಾಗಲಿ, ಬೇರೆ ದೇಶಕ್ಕೆ ಮಾರುವುದಾಗಲಿ ಸಾಧ್ಯವಿಲ್ಲ. ಸಿಬಿಐ ಈ ಮಾಹಿತಿಯನ್ನು ಕೇಳಿದಾಗ ನಾವು ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದೆವು. ಬಿನ್ ಲಾಡೆನ್ ಹೆಸರಿನಲ್ಲೂ ಆಧಾರ್ ಕಾರ್ಡ್ ಪಡೆಯಬಹುದು ಎಂಬುದು ಆಧಾರ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿಯದವರು ಮಾಡುವ ಆರೋಪ. ಸುಳ್ಳು ಹೆಸರಿನಲ್ಲಿ ಯಾರೇ ಆಧಾರ್ ಚೀಟಿ ಪಡೆದರೂ, ಅದಕ್ಕೆ ಕೊಂಡಿಯಾಗಿರುವುದು ಅವರದೇ ಬಯೋವುಟ್ರಿಕ್ ಎಂಬುದನ್ನು ಮರೆಯುವಂತಿಲ್ಲ. ನೀವು ಈಗಾಗಲೇ ಆಧಾರ್ ಹೊಂದಿದ್ದು, ಲಾಡೆನ್ ಹೆಸರಿನಲ್ಲಿ ಕಾರ್ಡ್ ಪಡೆದಾಗ ಆದಾರ್ ಡೇಟಾ ಬೇಸ್ ಅದನ್ನು ಸ್ವೀಕರಿಸುವುದಿಲ್ಲ. ಅದು ಡುಪ್ಲಿಕೇಟ್ ಎಂದು ತಿರಸ್ಕೃತವಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ನನ್ನ ರಾಜಕೀಯ ವಿರೋಧಿಗಳು ಆಧಾರ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿನ ಸೋರಿಕೆ ತಡೆಗಟ್ಟುವ ಸಲುವಾಗಿ ಕೆಲವು ಇಲಾಖೆಗಳಲ್ಲಿ ಆಧಾರ್ ಕಡ್ಡಾಯಗೊಳಿಸಲಾಗಿತ್ತೇ ವಿನಾಃ ಬೇರೆ ಅರ್ಥದಿಂದಲ್ಲ.
-ನಂದನ್ ನಿಲೇಕಣಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement