'ಕೈ' ಪ್ರಣಾಳಿಕೆ ಬಿಡುಗಡೆ, 'ನಿಮ್ಮ ಧ್ವನಿ, ನಮ್ಮ ಸಂಕಲ್ಪ' ಕಾಂಗ್ರೆಸ್ ಘೋಷವಾಕ್ಯ
ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್, ಭರವಸೆಗಳ..
ನವದೆಹಲಿ: ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರದ ಗದ್ದುಗೆ ಏರಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್, ಭರವಸೆಗಳ ಮಹಾಪೂರದೊಂದಿಗೆ ಬುಧವಾರ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಸೋನಿಯಾ ಗಾಂಧಿ, ದೇಶದಲ್ಲಿ ಕಾಂಗ್ರೆಸ್ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ನಾವು ಸಾಮಾನ್ಯ ವರ್ಗದ ಜನತೆಯ ಅಭಿವೃದ್ಧಿಗಾಗಿ ಶ್ರಮಿಸಿದ್ದೇವೆ. ಕಳೆದ 10 ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿದೆ ಎಂದರು. ಅಲ್ಲದೆ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ರಾಹುಲ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ತ್ವರಿತಗತಿ ಅಭಿವೃದ್ಧಿಯ ದೃಷ್ಟಿಯಿಂದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. 2009ರಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇ.90ರಷ್ಟು ಈಡೇರಿಸಲಾಗಿದೆ ಮತ್ತು ದೇಶದ 14 ಕೋಟಿ ಜನರನ್ನು ಬಡತನ ರೇಖೆಯಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು.
ಸುಮಾರು 5 ತಿಂಗಳ ಕಾಲ ಚುನಾವಣಾ ಪ್ರವಾಸ ಮಾಡಿ, ವಿವಿಧ ಕ್ಷೇತ್ರದ 10 ಸಾವಿರ ಜನರೊಂದಿಗೆ ಸಂವಾದ ನಡೆಸಿ ತಾವು ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸಿದ್ದು, ಈ ಪ್ರಣಾಳಿಕೆ ದೇಶದ ಜನತೆಯ ಧ್ವನಿಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು...
ನಿವೇಶನ ಹಕ್ಕು, 20 ವರ್ಷ ಬಾಡಿಗೆ ಮನೆಯಲ್ಲಿದ್ದರೆ ಮಾಲೀಕತ್ವದ ಹಕ್ಕು
ಆರೋಗ್ಯ ಹಕ್ಕು
ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ
ಮಹಿಳಾ ಮೀಸಲಾತಿಗೆ ಹೆಚ್ಚಿನ ಆದ್ಯತೆ
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ
ಪಿಂಚಣಿ ಹಕ್ಕು, ವೃದ್ಧಾಪ್ಯ ವೇತನ