ಕಲ್ಲಿದ್ದಲು ಹಗರಣ: ಕೋರ್ಟ್ಗೆ ೨ನೇ ಚಾರ್ಜ್ಶೀಟ್ ಸಲ್ಲಿಸಿದ ಸಿಬಿಐ
ನವದೆಹಲಿ: ಕಲ್ಲಿದ್ದಲು ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ, ದೆಹಲಿ ಹೈಕೋರ್ಟ್ಗೆ ಗುರುವಾರ ಎರಡನೇ ಚಾರ್ಜ್ಶೀಟ್ ಸಲ್ಲಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭಾ ಸದಸ್ಯ ವಿಜಯ್ ದರ್ದ ಹಾಗೂ ಪುತ್ರ ದೇವೇಂದ್ರ ದರ್ದ ಹೆಸರನ್ನು ಸಿಬಿಐ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ನಮೂದಿಸಿದೆ.
ವಿಜಯ್ ದರ್ದ ಅವರ ನಾಗಪುರ ಮೂಲದ ಎಎಂಆರ್ ಕಬ್ಬಿಣ ಮತ್ತು ಉಕ್ಕು ಸಂಸ್ಥೆಯ ವಿರುದ್ಧ ಸಿಬಿಐ ಚಾರ್ಜ್ಶೀಟ್ನಲ್ಲಿ ಪ್ರಸ್ತಾಪಿಸಿದ್ದು, ವಿಜಯ್ ದರ್ದ ಹಾಗೂ ಪುತ್ರ ದೇವೇಂದ್ರ ದರ್ದ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ(ಕ್ರಿಮಿನಲ್ ಸಂಚು), 420(ವಂಚನೆ) ಅಡಿಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ.
ಎಎಂಆರ್ ಸಂಸ್ಥೆಯ ನಿರ್ದೇಶಕ ಅರವಿಂದ್ ಕುಮಾರ್ ಜಯಸ್ವಲ್, ಮನೋಜ್ ಜಯಸ್ವಲ್ ರಮೇಶ್ ಜಯಸ್ವಲ್ ಸೇರಿದಂತೆ ಕಲ್ಲಿದ್ದಲು ಸಚಿವಾಲಯದ ಅಪರಿಚಿತ ಸಾರ್ವಜನಿಕ ಸೇವಕರ ವಿರುದ್ಧ ಚಾರ್ಜ್ಶೀಟ್ ದಾಖಲಾಗಿದೆ ಎಂದು ಸಿಬಿಐ ಮೂಲಗಳಿಂದ ತಿಳಿದುಬಂದಿದೆ.
ನಿರ್ದಿಷ್ಟ ಉದ್ದೇಶಕ್ಕಾಗಿ ಹಂಚಿಕೆಯಾದ ಕಲ್ಲಿದ್ದಲು ನಿಕ್ಷೇಪದಿಂದ ಕಲ್ಲಿದ್ದಲನ್ನು ನಿಯಮಬಾಹಿರವಾಗಿ ಬಹಿರಂಗ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ ಆರೋಪ ಮಾಡಲಾಗಿದೆ.
ಪ್ರಕರಣ ದಾಖಲಾದ ಬೆನ್ನಲ್ಲೇ, ಎಫ್ಐಆರ್ನಲ್ಲಿ ಹೆಸರಿಸಲಾಗಿರುವ ಕಂಪೆನಿಗಳ ಆವರಣ ಸೇರಿದಂತೆ ಹಲವು ಸ್ಥಳಗಳಲ್ಲಿ ಸಿಬಿಐ ಶೋಧಕಾರ್ಯ ಕೈಗೊಂಡಿದೆ. ದೆಹಲಿ, ನಾಗಪುರ್, ಮುಂಬೈ ಹಾಗೂ ಚತ್ತೀಸಗಡ್ಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.