ವಿದೇಶದಿಂದ ನಿಧಿ ಸಂಗ್ರಹ: ಕಾಂಗ್ರೆಸ್ ಬಿಜೆಪಿ ವಿರುದ್ಧ ಕ್ರಮಕ್ಕೆ ಹೈ ಆದೇಶ
ಕಾನೂನು ಉಲ್ಲಂಘಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ವಿದೇಶದಿಂದ ನಿಧಿ ಸಂಗ್ರಹಿಸುತ್ತಿರುವ ಬಗ್ಗೆ ಕ್ರಮಕೈಗೊಳ್ಳಿ ಎಂದು...
ನವದೆಹಲಿ: ಕಾನೂನು ಉಲ್ಲಂಘಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ವಿದೇಶದಿಂದ ನಿಧಿ ಸಂಗ್ರಹಿಸುತ್ತಿರುವ ಬಗ್ಗೆ ಕ್ರಮಕೈಗೊಳ್ಳಿ ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಕ್ಕೆ ವಿದೇಶದಿಂದ ಹರಿದು ಬರುತ್ತಿರುವ ದೇಣಿಗೆ ಕುರಿತು ಕ್ರಮಕೈಗೊಳ್ಳಿ ಎಂದು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಇಂದು ಸೂಚಿಸಿದೆ.
ನ್ಯಾಯಾಮೂರ್ತಿ ಪ್ರದೀಪ್ ನಂದ್ರಜೋಗ್ ಮತ್ತು ನ್ಯಾಯಾಮೂರ್ತಿ ಜಯಂತ್ ನಾಥ್ ಅವರನ್ನೊಳಗೊಂಡ ನ್ಯಾಯಾಪೀಠ ಈ ಆದೇಶ ಹೊರಡಿಸಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ದೇಣಿಗೆ ರೂಪದಲ್ಲಿ ಅಕ್ರಮವಾಗಿ ವಿದೇಶಿಯರಿಂದ ಹಣ ಪಡೆಯುತ್ತಿದ್ದು, ವಿದೇಶ ಕೊಡುಗೆ ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿವೆ ಎಂದು ನ್ಯಾಯಾಪೀಠ ಹೇಳಿದೆ.
ಈ ಎರಡು ಪಕ್ಷಗಳಿಗೆ ವಿದೇಶದಿಂದ ಹರಿದು ಬರುತ್ತಿರುವ ದೇಣಿಗೆ ಬಗ್ಗೆ ಪರಿಶೀಲಿಸಿ, 6 ತಿಂಗಳೊಳಗೆ ಕ್ರಮಕೈಗೊಳ್ಳಿ ಎಂದು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಕೋರ್ಟ್ ಸೂಚಿಸಿದೆ.