ಭರವಸೆಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ವಿಫಲ: ಮೋದಿ
ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸಾವಿರಾರು ಭರವಸೆಗಳನ್ನು ನೀಡಿದ್ದು...
ನವದೆಹಲಿ: ಕಳೆದ 10 ವರ್ಷಗಳಲ್ಲಿ ಕಾಂಗ್ರೆಸ್ ಸಾವಿರಾರು ಭರವಸೆಗಳನ್ನು ನೀಡಿದ್ದು, ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಹರಿಯಾಣದ ಗೋಹಾನದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಯ ವೈಖರಿ ವಿರುದ್ಧ ಹಾರಿಹಾಯ್ದರು. ಕಾಂಗ್ರೆಸ್ ಕೇವಲ ಬಾಯಿ ಮಾತಿನ ಭರವಸೆಗಳನ್ನು ನೀಡುತ್ತಾ ಬಂದಿದೆ. ದೇಶದ ಅಭಿವೃದ್ಧಿಗಾಗಿ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಕಾಂಗ್ರೆಸ್ ಸೋತಿದೆ ಎಂದು ಕಿಡಿಕಾರಿದರು.
ಈಗ ದೇಶ ಬದಲಾಗಿದೆ, ಕೇವಲ ಭರವಸೆಗಳನ್ನು ಜನರು ನಂಬುವುದಿಲ್ಲ. ಅವರು ಅಭಿವೃದ್ದಿಯನ್ನು ಬಯಸುತ್ತಿದ್ದಾರೆ. ಉದ್ಯೋಗ ಸೃಷ್ಠಿಗಾಗಿ ಬಿಜೆಪಿ ಸರ್ಕಾರ ರೋಜ್ಗಾರ್ ಯೋಜನೆಯನ್ನು ಕೈಗೊಂಡಿತ್ತು. ಅಂತಹ ಯೋಜನೆಗಳು ಬೇಕಾಗಿದೆ. ಯುವಕರಿಗೆ ಉದ್ಯೋಗ ಸೃಷ್ಠಿ ಮಾಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕೇವಲ ಹೆಸರು ಸಂಪಾದನೆಯೊಂದೆ ಮುಖ್ಯವಲ್ಲ. ನಾವು ಅಭಿವೃದ್ಧಿ ಪತದಲ್ಲಿ ಸಾಗುವುದು ಅತಿ ಮುಖ್ಯ. ಅಂತಹ ಕಾರ್ಯರೂಪಕ್ಕೆ ಮುಂದಾಗಬೇಕಿದೆ. ಈ ಚುನಾವಣೆ ನಾಮದಾರ್ V/S ಕಾಮದಾರ್ (ನಾಮಕ ರೂಪ/ಕಾರ್ಯ ರೂಪ ) ನಡುವೆ ನಡೆಯುವ ಸ್ಫರ್ಧೆ ಎಂದರು.