ಮಸೂದ್ ಬಂಧನ: ಸಹಾರನ್‌ಪುರ ರಾಹುಲ್ ರ್ಯಾಲಿ ರದ್ದು
ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಬಂಧನದ ಬಳಿಕ...
ಸಹಾರನ್‌ಪುರ್: ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ ಬಂಧನದ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ತಮ್ಮ ಸಹಾರನ್‌ಪುರ ಚುನಾವಣಾ ರ್ಯಾಲಿಯನ್ನು ಶನಿವಾರ ರದ್ದುಗೊಳಿಸಿದ್ದಾರೆ.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಸಹಾರನ್‌ಪುರ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್‌ರನ್ನು ಇಂದು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಕ್ಯಾಮೆರಾ ಎದುರೇ ಮಸೂದ್ ಅವರು ಮೋದಿ ಅವರನ್ನು ಕೊಚ್ಚಿ ಕೊಲೆ ಮಾಡುವುದಾಗಿ ಹೇಳಿಕೆ ನೀಡಿದ್ದರು. ಮಸೂದ್ ಹೇಳಿಕೆ ವಿರುದ್ಧ ಬಿಜೆಪಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ಮಸೂದ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಈ ದ್ವೇಷದ ಹೇಳಿಕೆಗೆ ಸಂಬಂಧಿಸಿ ವಿವರಣೆ ಕೇಳಿರುವ ಚುನಾವಣಾ ಆಯೋಗ ಇಮ್ರಾನ್ ತಪ್ಪಿತಸ್ಥರು ಎಂದು ಕಂಡು ಬಂದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಇಮ್ರಾನ್ ಮಸೂದ್ ನೀಡಿದ್ದ ಈ ಪ್ರಚೋದನಾತ್ಮಕ ಹೇಳಿಕೆ ಈಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ವಿವಾದದಿಂದ ದೂರ ಉಳಿಯಲು ಕಾಂಗ್ರೆಸ್ ನಿರ್ಧರಿಸಿದೆ.
ಸಹಾರನ್‌ಪುರದಲ್ಲಿ ಮಸೂದ್ ಹೇಳಿದ್ದು...
ನಾನೊಬ್ಬ ಅಬ್ಬೇಪಾರಿ. ಜನರಿಗಾಗಿ ನನ್ನ ಪ್ರಾಣ ನೀಡಲು, ಪ್ರಾಣ ತೆಗೆಯಲೂ ಹಿಂದೆ ಮುಂದೆ ನೋಡುವವನಲ್ಲ. ಮೋದಿ ಉತ್ತರಪ್ರದೇಶವನ್ನೂ ಗುಜರಾತ್ ಎಂದೇ ಭಾವಿಸಿದ್ದಾರೆ. ಗುಜರಾತ್‌ನಲ್ಲಿರೋದು ಕೇವಲ ಶೇ. 4ರಷ್ಟು ಮುಸ್ಲಿಮರು. ಆದರೆ, ಉತ್ತರಪ್ರದೇಶದಲ್ಲಿ ಶೇ.22ರಷ್ಟು ಮುಸ್ಲಿಮರಿದ್ದಾರೆ. ಮೋದಿಗೆ ತಕ್ಕ ಉತ್ತರ ಹೇಗೆ ನೀಡಬೇಕೆಂಬುದು ನನಗೆ ಚೆನ್ನಾಗಿ ಗೊತ್ತು. ನಾವು ಅವರನ್ನು ಕೊಚ್ಚಿ ಕೊಲ್ಲುತ್ತೇವೆ.