ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಲೋಕಸಮರ: ರಾಜ್ಯದಲ್ಲಿ 435 ಅಭ್ಯರ್ಥಿಗಳು ಕಣದಲ್ಲಿ

ರಾಜ್ಯದ 28 ಜಿಲ್ಲೆಗಳ ಪೈಕಿ ಅಂತಿಮವಾಗಿ ಒಟ್ಟು 435 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಶನಿವಾರ ಹೇಳಿದರು.

Vishwanath S
Updated On : 29 Mar 2014, 8:11 am

ಬೆಂಗಳೂರು: ರಾಜ್ಯದ 28 ಜಿಲ್ಲೆಗಳ ಪೈಕಿ ಅಂತಿಮವಾಗಿ ಒಟ್ಟು 435 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರು ಶನಿವಾರ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, 109 ಮಂದಿ ಅಭ್ಯರ್ಥಿಗಳು ತಮ್ಮ ನಾಮಪತ್ರ ವಾಪಸ್ ಪಡೆಸಿದ್ದಾರೆ. ಇದರಿಂದಾಗಿ ಸುಮಾರು 435 ಅಭ್ಯರ್ಥಿಗಳ ಕಣದಲ್ಲಿದ್ದು, ಆ ಪೈಕಿ 412 ಪುರುಷ ಹಾಗೂ 23 ಮಹಿಳಾ ಅಭ್ಯರ್ಥಿಗಳು ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಲೋಕಸಭಾ ಚುನಾವಣಾ ಕಣದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರು ಹಾಸನ ಜಿಲ್ಲೆಯಿಂದ ಸ್ಫರ್ಧಿಸುತ್ತಿದ್ದಾರೆ. ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರದಿಂದ ಹಾಗೂ ಕೆ.ಹೆಚ್. ಮುನಿಯಪ್ಪ ಕೋಲಾರ ಜಿಲ್ಲೆಯಿಂದ ಹಾಗೂ ಮಲ್ಲಿಕಾರ್ಜುನ್ ಖರ್ಗೆ ಗುಲ್ಬರ್ಗಾದಿಂದ ಸ್ಪರ್ಧಿಸುತ್ತಿದ್ದಾರೆ.

ಹಾಲಿ ಸಚಿವ ಪ್ರಕಾಶ್ ಹುಕ್ಕೇರಿ ಚಿಕ್ಕೋಡಿಯಿಂದ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಬೆಂಗಳೂರು ದಕ್ಷಿಣದಿಂದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಷಿ ಧಾರವಾಡ ಕ್ಷೇತ್ರದಿಂದ ಅಖಾಡದಲ್ಲಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಿಂದ, ಸದಾನಂದಗೌಡ ಬೆಂಗಳೂರು ಉತ್ತರದಿಂದ, ಎಚ್.ಡಿ. ಕುಮಾರಸ್ವಾಮಿ ಚಿಕ್ಕಬಳ್ಳಾಪುರದಿಂದ ಹಾಗೂ ಧರ್ಮಸಿಂಗ್ ಬೀದರ್ ನಿಂದ ಚುನಾವಣಾ ಕಣದಲ್ಲಿದ್ದು, ಮಾಜಿ ಸಚಿವರಾದ ಶೋಭಾ ಕರಂದ್ಲಾಜೇ ಉಡುಪಿಯಿಂದ, ಶ್ರೀರಾಮುಲು ಬಳ್ಳಾರಿಯಿಂದ ಹಾಗೂ ಬಿ.ಎನ್. ಬಚ್ಚೇಗೌಡ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಕಣದಲ್ಲಿದ್ದಾರೆ. ತಾರ ವರ್ಚಸ್ಸು ಹೊಂದಿರುವ ನಟಿ ರಮ್ಯಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸುತ್ತಿದ್ದಾರೆ.

ಜಿದ್ದಾಜಿದ್ದಿನ ಕ್ಷೇತ್ರಗಳು:
ಬೆಂಗಳೂರು ದಕ್ಷಿಣ ಕ್ಷೇತ್ರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳು ಹೆಚ್ಚು ಜಿದ್ದಾಜಿದ್ದಿನ ಸ್ಫರ್ಧೆಗೆ ಸಾಕ್ಷಿಯಾಗಿವೆ. ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿಯ ಅನಂತ್ ಕುಮಾರ್ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಆಧಾರ್ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು ಸ್ಪರ್ಧಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಜೆಡಿಎಸ್‌ನಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಅವರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ಬಿ.ಎನ್. ಬಚ್ಚೇಗೌಡ ಅಖಾಡದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement