ಜೆಡಿಎಸ್ ತೊರೆದು ಬಿಜೆಪಿ ಸೇರಿದ ಜ್ಯೋತಿ
ಗೌರಿಬಿದನೂರಿನ ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಅವರು ಜೆಡಿಎಸ್ ತೊರೆದು ಬಿಜೆಪಿಗೆ...
ಬೆಂಗಳೂರು: ಗೌರಿಬಿದನೂರಿನ ಮಾಜಿ ಶಾಸಕಿ ಜ್ಯೋತಿ ರೆಡ್ಡಿ ಅವರು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಮುಂದುವರೆದಿದ್ದು, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಲಾಯನ ಮಾಡುತ್ತಿದ್ದಾರೆ. ಅದಕ್ಕೆ ಮತ್ತೊಂದು ಸೇರ್ಪಡೆ ಮಾಜಿ ಶಾಸಕಿ ಜ್ಯೋತಿ ರೆಡ್ಡಿ. ಜೆಡಿಎಸ್ ಪಕ್ಷವನ್ನು ತೊರೆದು ಭಾನುವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಆರ್. ಅಶೋಕ್, ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಬಿ.ಎನ್. ಬಚ್ಚೇಗೌಡ ಹಾಗೂ ವಿ. ಸೋಮಣ್ಣ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಬಿಜೆಪಿಗೆ ಸೇರ್ಪಡೆಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜ್ಯೋತಿ ರೆಡ್ಡಿ ಅವರು, ಜೆಡಿಎಸ್ ಕೌಟುಂಬಿಕ ಮಾಲಿಕತ್ವದಲ್ಲಿದೆ ಎಂದು ಆರೋಪಿಸಿದರು. ಜೆಡಿಎಸ್ ರಿಯಲ್ ಎಸ್ಟೇಟ್ ಹಿನ್ನೆಲೆಯುಳ್ಳವರಿಗೆ ಮಣೆ ಹಾಕುತ್ತಿದೆ. ಜೆಡಿಎಸ್ ಹೀಗ ಗೊಂದಲದ ಗೂಡಾಗಿದ್ದು, ಉಸಿರು ಕಟ್ಟಿಸುವಂತಾ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿಕಾರಿದರು.