ಅಕ್ರಮ ಗಣಿಗಾರಿಕೆಗೆ ಸಿಎಂ ಬೆಂಬಲ: ಕುಮಾರಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಮಡಿಕೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ಬೆಂಬಲ ನೀಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಸಿಎಂ ರಕ್ಷಣೆ ನೀಡುತ್ತಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಬಳ್ಳಾರಿವರೆಗೆ ಮಾಡಿದ್ದು ಡೋಂಗಿ ಪಾದಯಾತ್ರೆ ಎಂದು ಕಿಡಿಕಾರಿದರು.
ದಾವಣಗೆರೆ ಜಿಲ್ಲೆಯ ನಾಲ್ಕು ಗಣಿ ಕಂಪನಿಗಳು ಗಣಿ ಇಲಾಖೆ ಶಿಫಾರಸುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿವೆ ಎಂದು ಎಚ್ಡಿಕೆ ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಕಸ್ತೂರಿ ಮೈನ್ಸ್, ದೇವಗಿರಿಯಲ್ಲಿರುವ ಕುಮಾರಸ್ವಾಮಿ ಮಿನರಲ್ಸ್ ಕಂಪನಿ, ಕುಮಾರಸ್ವಾಮಿ ಮೈನಿಂಗ್ ಸಂಸ್ಥೆ ಹಾಗೂ ಕವಿರಾಜ ಮೈನ್ಸ್ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದು, ಈ ಕಂಪನಿಗಳ ವಿರುದ್ಧ ಸಿಎಂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದರು. ಅಲ್ಲದೆ ಈ ಬಗ್ಗೆ ಸಿದ್ದರಾಮಯ್ಯ ಮೌನವಹಿಸಿರುವುದು ಏಕೆ? ಸಿದ್ದು ಲಾಯರ್ ಆಗಿ ಸಂಪಾದಿಸಿದ ಆಸ್ತಿ ಎಷ್ಟು? ಬ್ಲಾಕ್ಲಿಸ್ಟ್ ಗುತ್ತಿಗೆದಾರರು ಕೊಟ್ಟ ಕೊಡುಗೆ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವ ಈ ನಾಲ್ಕು ಕಂಪನಿಗಳ ಲೈಸೆನ್ಸ್ ರದ್ದುಪಡಿಸುವಂತೆ ಕೇಂದ್ರ ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೂಚನೆ ನೀಡಿದೆ. ಆದರೂ ಇಲಾಖೆಯ ಆದೇಶವನ್ನು ಉಲ್ಲಂಘಿಸಿ ಗಣಿಗಾರಿಕೆ ನಡೆಸಲಾಗುತ್ತಿದ್ದು, ಇವರಿಗೆ ರಾಜ್ಯ ಸರ್ಕಾರವೇ ಬೆಂಬಲವಾಗಿ ನಿಂತಿದೆ ಎಂದು ದೂರಿದರು.