ಸಿಎಂಗೆ ಎದೆಗಾರಿಕೆ ಇದ್ದರೆ ನಮ್ಮ ಆಸ್ತಿಯನ್ನು ಸಿಬಿಐಗೆ ಒಪ್ಪಿಸಲಿ: ಎಚ್ಡಿಕೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದೆಗಾರಿಕೆ ಇದ್ದರೆ ನಮ್ಮ ಕುಟುಂಬದ ಆಸ್ತಿಯನ್ನು ಸಿಬಿಐ ತನಿಖೆಗೆ ಒಪ್ಪಿಸಲಿ...
ಕೊಡಗು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎದೆಗಾರಿಕೆ ಇದ್ದರೆ ನಮ್ಮ ಕುಟುಂಬದ ಆಸ್ತಿಯನ್ನು ಸಿಬಿಐ ತನಿಖೆಗೆ ಒಪ್ಪಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾಸ್ವಾಮಿ ಅವರು ಮಂಗಳವಾರ ಸವಾಲು ಹಾಕಿದ್ದಾರೆ.
ಇಂದು ತಲಾಕಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರೊಬ್ಬರ ಆಸ್ತಿಯನ್ನು ಸಿಬಿಐಗೆ ಒಪ್ಪಿಸದೇ, ದೇವೇಗೌಡ ಕುಟುಂಬದ ಆಸ್ತಿಯನ್ನು ಸಿಬಿಐಗೆ ಒಪ್ಪಿಸಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಅಕ್ರಮ ಗಣಿಗಾರಿಕೆ ಮಾಡುತ್ತಿರುವವರಿಗೆ ರಕ್ಷಣೆ ನೀಡುತ್ತಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು. ಅಲ್ಲದೆ ಅಕ್ರಮ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯ ಬಳ್ಳಾರಿವರೆಗೆ ಮಾಡಿದ್ದು ಡೋಂಗಿ ಪಾದಯಾತ್ರೆ ಎಂದು ಕಿಡಿಕಾರಿದರು.
ಇದೇ ವೇಳೆ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಸಿಎಂ ರಕ್ಷಣೆ ನೀಡುತ್ತಿದ್ದು, ಇಂದು ಮಧ್ಯಾಹ್ನ ಅವರ ವಿವರವನ್ನು ಬಹಿರಂಗಪಡಿಸುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ.