ಸ್ಮೃತಿ ವಿರುದ್ಧ ಕುಮಾರ್ ವಿಶ್ವಾಸ್ ವಾಗ್ದಾಳಿ
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ..
ನವದೆಹಲಿ: ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಕಿರುತೆರೆ ನಟಿ ಸ್ಮೃತಿ ವಿರುದ್ಧ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಮಂಗಳವಾರ ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಅಮೇತಿ ಪ್ರದೇಶದ ಜನತೆ ರಾಜಕೀಯಕ್ಕೆ ಬಂದ ನಟರಿಂದ ಬೇಸತ್ತು ಹೋಗಿದ್ದರು. ಇದರ ನಡುವೆ ನಟಿಯರು ರಾಜಕೀಯಕ್ಕೆ ಆಗಮಿಸಿದ್ದು, ಜನತೆಗೆ ಸಾಕಾಗಿ ಹೋದಂತಾಗಿದೆ ಎಂದು ಹೇಳುವ ಮೂಲಕ ಸ್ಮೃತಿಯವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ಬಿಜೆಪಿ ಸ್ಮೃತಿಯವರನ್ನು ನನ್ನ ಮತ್ತು ರಾಹುಲ್ ವಿರುದ್ದ ಕಣಕ್ಕಿಳಿಸುತ್ತಿರುವುದರಿಂದ ಸ್ಮೃತಿ ಅವರ ಮೇಲೆ ಅನುಕಂಪ ಮೂಡಿದೆ. ಸುಮ್ಮನೇ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳಲು ನಟಿಯರನ್ನು ಬಳಸಿಕೊಳ್ಳುತ್ತಿದ್ದು, ಇದರ ಬಗ್ಗೆ ಸ್ಮೃತಿ ಅವರಿಗೆ ಅರಿವಾಗದಿರುವುದು ವಿಪರ್ಯಾಸ ಎಂದಿದ್ದಾರೆ.
ಅಮೇತಿಯಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಕಲಾವಿದರು, ಜನ ಸೇವೆ ಮಾಡುವುದೇ ಕಡಿಮೆ, ಕೇವಲ ಪ್ರಚಾರಕ್ಕಾಗಿ ಆಗಮಿಸಿ, ಮತ್ತೆ ಮುಂದಿನ ಚುನಾವಣೆವರೆಗೆ ನಾಪತ್ತೆಯಾಗುತ್ತಾರೆ. ಅಂತಹದರಲ್ಲಿ ಸ್ಮೃತಿಯವರು ಕಣಕ್ಕಿಳಿಯುತ್ತಿದ್ದಾರೆ. ಯಾರೇ ಕಣಕ್ಕಿಳಿಯಲಿ, ಅಮೇತಿ ಜನತೇ ಮಾತ್ರ ಈಗಾಗಲೇ ಅವರ ನಾಯಕ ಯಾರೇಂದು ನಿರ್ಧರಿಸಿದ್ದಾರೆ ಎಂದು ವಿಶ್ವಾಸ ಹೇಳಿದ್ದಾರೆ.