ಮೋದಿ ಹೇಳಿಕೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಅಹ್ಮದ್ ಪಟೇಲ್
ನಾನು ತಮ್ಮ ಒಳ್ಳೆಯ ಸ್ನೇಹಿತ ಎಂಬ ಹೇಳಿಕೆಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಾಬೀತು...
ನವದೆಹಲಿ: ನಾನು ತಮ್ಮ ಒಳ್ಳೆಯ ಸ್ನೇಹಿತ ಎಂಬ ಹೇಳಿಕೆಯನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರು ಶುಕ್ರವಾರ ಸವಾಲು ಹಾಕಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯ ಸಂದರ್ಶನದಲ್ಲಿ ಮೋದಿ ಅವರ ಹೇಳಿಕೆಗೆ ಉತ್ತರಿಸಿದ ಪಟೇಲ್, ಮೋದಿ ನಾನು ಅವರ ಒಳ್ಳೆಯ ಸ್ನೇಹಿತ ಮತ್ತು ಅವರು ಮುಖ್ಯಮಂತ್ರಿ ಆಗುವ ಮುನ್ನ ಅವರ ಮನೆಗೆ ಹೋಗುತ್ತಿದ್ದೆ ಎಂಬ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಇದು ಸತ್ಯವೇ ಆಗಿದ್ದರೆ, ಮೋದಿ ಅದನ್ನು ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ಇದು ಚುನಾವಣೆ ಸಮಯ. ರಾಜಕೀಯ ನಾಯಕರು ಈ ರೀತಿಯ ಆಧಾರ ರಹಿತ ಹೇಳಿಕೆಗಳನ್ನು ನೀಡುವುದು ಸಾಮಾನ್ಯ. ಆದರೆ ನಾನು ಮತ್ತು ಮೋದಿ 1980ರಲ್ಲಿ ಒಮ್ಮೆ ಮಾತ್ರ ಒಟ್ಟಿಗೆ ಊಟ ಮಾಡಿದ್ದೇವೆ. ಈ ವಿಷಯ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರಿಗೂ ಗೊತ್ತಿತ್ತು. ಈ ವಿಷಯವನ್ನು ಈ ಹಿಂದೆಯೂ ನಾನು ಸ್ಪಷ್ಟಪಡಿಸಿದ್ದೇನೆ. 2001ರಲ್ಲಿ ಮೋದಿ ಮುಖ್ಯಮಂತ್ರಿಯಾದ ಮೇಲೆ ನಾನು ಅವರೊಂದಿಗೆ ಒಂದು ಕಪ್ ಟೀ ಕೂಡ ಕೂಡ ಕುಡಿದಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನಲ್ಲಿರುವ ನನ್ನ ಒಳ್ಳೆಯ ಸ್ನೇಹಿತರ ಪೈಕಿ ಅಹ್ಮದ್‌ಭಾಯ್ ಸಹ ಒಬ್ಬರು. ಅವರು ನನ್ನ ಒಳ್ಳೆಯ ಸ್ನೇಹಿತರಾಗಿದ್ದರು. ಅವರ ಜತೆ ಉತ್ತಮ ಸ್ನೇಹ ಬಾಂಧವ್ಯವಿತ್ತು. ಅದು ಹಾಗೇ ಉಳಿಯಬೇಕು ಎಂಬುದು ನನ್ನ ಬಯಕೆ. ಆದರೆ ಅವರು ಈಗ ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ನನ್ನ ಫೋನ್ ಕರೆಗಳನ್ನು ಸಹ ಸ್ವೀಕರಿಸುತ್ತಿಲ್ಲ ಎಂದು ಮೋದಿ ಭಾನುವಾರ ದೂರದರ್ಶನಕ್ಕೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು. ಆದರೆ ಮೋದಿ ಅವರ ಈ ಹೇಳಿಕೆ ವಿವಾದಕ್ಕಿಡಾಗುತ್ತಿದ್ದಂತೆ ಈ ಭಾಗಕ್ಕೆ ದೂರದರ್ಶನ ಕತ್ತರಿ ಹಾಕಿದೆ.
ಮೋದಿ ಅವರ ಕೆಲ ಮಾತುಗಳು 'ಸೂಕ್ಷ್ಮ' ಎಂದು ಪರಿಗಣಿಸಿದ ದೂರದರ್ಶನ ವಾಹಿನಿ, ಕೆಲವು ತುಣುಕುಗಳನ್ನು ತೆಗೆದುಹಾಕಿದೆ.