ಪರಮೇಶ್ವರ ನಿವಾಸಕ್ಕೆ ಜಾಫರ್ ಷರೀಫ್ ಭೇಟಿ
ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು..
ಬೆಂಗಳೂರು: ಕಾಂಗ್ರೆಸ್ ತೊರೆಯುವುದಾಗಿ ಹೇಳಿದ್ದ ಕೇಂದ್ರದ ಮಾಜಿ ಸಚಿವ ಸಿ.ಕೆ.ಜಾಫರ್ ಷರೀಫ್ ಅವರು ಶನಿವಾರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ ನಿವಾಸಕ್ಕೆ ಇಂದು ಜಾಫರ್ ಷರೀಫ್ ಅವರು ಭೇಟಿ ನೀಡಿದ್ದು, ನಾಯಕರ ಈ ಭೇಟಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಪರಮೇಶ್ವರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾಫರ್ ಷರೀಫ್, ಪರಮೇಶ್ವರ ಅವರಿಗೆ ತಮ್ಮ ಮೊಮ್ಮಗಳ ಮದುವೆ ಆಮಂತ್ರಣ ನೀಡಲು ಬಂದಿದ್ದೆ. ನಾನು ಸದ್ಯ ಕಾಂಗ್ರೆಸ್‌ನಲ್ಲಿ ಇಲ್ಲ ಮತ್ತು ರಾಜ್ಯಸಭೆಗೆ ಆಯ್ಕೆಯಾಗುವ ಆಸಕ್ತಿ ತಮಗೆ ಇಲ್ಲ ಎಂದು ಜಾಫರ್ ಷರೀಫ್ ಸ್ಪಷ್ಟಪಡಿಸಿದ್ದಾರೆ.
ಪಕ್ಷ ಅಧಿಕಾರದಲ್ಲಿ ಇಲ್ಲದಿರುವುಗಾಲೂ ನಾನು ಕಾಂಗ್ರೆಸ್‌ಗಾಗಿ ದುಡಿದಿದ್ದೇನೆ. ಆದರೆ ಕಾಂಗ್ರೆಸ್ ನಡೆಸಿಕೊಂಡ ರೀತಿ ಬಗ್ಗೆ ಈಗ ಯಾವುದೇ ಪ್ರತಿಕ್ರಿಯೆ ನೀಡಲ್ಲ. ಆದರೆ ನಾನು ಇನ್ನು ಯಾವುದೇ ಪಕ್ಷ ಸೇರಿಲ್ಲ. ರಾಜಕಾರಣದಲ್ಲಿ ಸದಕ್ಕೆ ತಟಸ್ಥವಾಗಿದ್ದೇನೆ ಎಂದು ಜಾಫರ್ ಷರೀಫ್ ತಿಳಿಸಿದ್ದಾರೆ.
ಕಾಂಗ್ರೆಸ್‌ನಿಂದ ತಾವು ದೂರವಾಗಿರುವುದಾಗಿ ಹೇಳಿದ್ದ ಷರೀಫ್, ಲೋಕಸಭೆ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಸಿದ್ದು ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು.
ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಿ ಅಧಿಕಾರ ನಡೆಸುತ್ತಿದ್ದಾರೆ. ತಮ್ಮ ಆಪ್ತ ವಲಯಕ್ಕೆ ಮಾತ್ರ ಮನ್ನಣೆ ನೀಡುತ್ತ ಮೂಲ ಕಾಂಗ್ರೆಸಿಗರನ್ನು ಮೂಲೆ ಗುಂಪು ಮಾಡುತ್ತಿದ್ದಾರೆ ಎಂದು ಷರೀಫ್ ಸೋನಿಯಾಗೆ ಬರೆದ ಪತ್ರದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ತಾವು ಕಾಂಗ್ರೆಸ್ ಪರ ಪ್ರಚಾರ ಮಾಡುವುದಿಲ್ಲ ಎಂದಿದ್ದರು. ಅಲ್ಲದೆ ಬಹಿರಂಗವಾಗಿಯೇ ಜೆಡಿಎಸ್ ಬೆಂಬಲಿಸುವಂತೆ ಕರೆ ನೀಡಿದ್ದರು.