ಅಜಂಗಢ ಉಗ್ರರ ನೆಲೆ: ಶಾ ಹೇಳಿಕೆ ವಿರುದ್ಧ ಕ್ರಮಕ್ಕೆ 'ಕೈ' ಆಗ್ರಹ
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಅವರ ಆಪ್ತ ಅಮಿತ್ ಶಾ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ವಿವಾದಾತ್ಮಕ ಹೇಳಿಕೆ ನೀಡಿರುವ ಶಾ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ.
ಅಜಂಗಢ ಉಗ್ರರ ನೆಲೆಯಾಗಿದೆ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮೋದಿ ಮತ್ತು ಅಮಿತ್ ಶಾ ಅವರು ಅಭಿವೃದ್ಧಿಯಿಂದ ಕೋಮುವಾದಿ ರಾಜಕಾರಣಕ್ಕೆ ಮರಳಿದ್ದಾರೆ. ಮೋದಸಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಭಾಗಿಯಾಗಿದ್ದಾರೆ ಎಂಬುದನ್ನು ಅವರು ಮರೆತಿದ್ದಾರೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಟ್ವಿಟ್ ಮಾಡಿದ್ದಾರೆ.
ಮೋದಸಾ ಗುಜರಾತ್ನಲ್ಲಿದೆ. ಅಜಂಗಢ ಹಿಂದೂ-ಮುಸ್ಲಿಂ ಏಕತೆಯ ಸಂಕೇತ. 1947 ರ ದೇಶವಿಭಜನೆಯ ಬಳಿಕ ಹಾಗೂ 1992ರ ಬಾಬ್ರಿ ಮಸೀದಿ ಧ್ವಂಸದ ಬಳಿಕವೂ ಅಲ್ಲಿ ಹಿಂಸಾಚಾರ ನಡೆದಿಲ್ಲ. ಅಜಂಗಢದ ಬಗ್ಗೆ ಅಮಿತ್ ಶಾ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಅವರ ವಿರುದ್ಧ ಚುನಾವಣೆ ಆಯೋಗ ಕ್ರಮ ಕೈಗೊಳ್ಳಬೇಕು'' ಎಂದು ಸಿಂಗ್ ಹೇಳಿದ್ದಾರೆ.