ಪ್ರಿಯಂಕಾ ಗಾಂಧಿಗೆ ಅಮೇಠಿಯಿಂದ ಹೋಗಲು ಹೇಳಿ: ಕುಮಾರ್ ವಿಶ್ವಾಸ್
ಅಮೇಠಿಯಿಂದ ಹೊರಹೋಗಿ, ಇಲ್ಲವಾದರೆ ನಿಮ್ಮನ್ನು ಬಂಧಿಸ..
ಲಕ್ನೋ: ಅಮೇಠಿಯಿಂದ ಹೊರಹೋಗಿ, ಇಲ್ಲವಾದರೆ ನಿಮ್ಮನ್ನು ಬಂಧಿಸಲಾಗುವುದು ಎಂದು ಅಮೇಠಿ ಜಿಲ್ಲಾಡಳಿತ ಹೇಳಿರುವುದಾಗಿ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಆರೋಪಿಸಿದ್ದಾರೆ. ಸೋಮವಾರ ರಾತ್ರಿಯೇ ಅಮೇಠಿ ಬಿಟ್ಟು ಹೋಗಬೇಕೆಂದು ಜಿಲ್ಲಾಡಳಿತ ತನಗೆ ಎಚ್ಚರಿಕೆ ನೀಡಿತ್ತು ಎಂದು ಅಮೇಠಿ ಲೋಕಸಭಾಕ್ಷೇತ್ರದ ಆಪ್ ಅಭ್ಯರ್ಥಿ ವಿಶ್ವಾಸ್ ಹೇಳಿದ್ದಾರೆ.
ಬಲ್ಲಮೂಲಗಳ ಪ್ರಕಾರ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕುಮಾರ್ ವಿಶ್ವಾಸ್ ಅವರ ಬಾಡಿಗೆ ಮನೆಗೆ ತೆರಳಿ, ವಿಶ್ವಾಸ್ ಅವರ ಪತ್ನಿ ಮತ್ತು ಕುಟುಂಬದವರಿಗೆ ರಾತ್ರಿ 11 ಗಂಟೆಯೊಳಗೆ ಅಮೇಠಿ ಬಿಟ್ಟು ಹೋಗಬೇಕೆಂದು ಹೇಳಿದೆ. ವಿಶ್ವಾಸ್ ಕುಟುಂಬ ಪ್ರಸ್ತತ ಲೋಕಸಭಾ ಕ್ಷೇತ್ರದಲ್ಲಿನ ನೋಂದಾಯಿತ ಮತದಾರರು ಅಲ್ಲದೇ ಇರುವ ಕಾರಣ ಅಮೇಠಿ ಬಿಟ್ಟು ಹೋಗಲು ಹೇಳಲಾಗಿದೆ.
ಅಮೇಠಿಯಲ್ಲಿ ಚುನಾವಣಾ ಪ್ರಚಾರ ಅಂತ್ಯಗೊಂಡಿರುವ ಕಾರಣ ಅಲ್ಲಿ ನೋಂದಾಯಿತ ಮತದಾರರು ಅಲ್ಲದೇ ಇರುವವರು ಇರಬಾರರದು. ಆ ಕಾರಣಕ್ಕಾಗಿ ವಿಶ್ವಾಸ್ ಕುಟುಂಬದವರಿಗೆ ಅಮೇಠಿ ಬಿಡುವಂತೆ ಆದೇಶಿಸಲಾಗಿತ್ತು.
ಈ ಬಗ್ಗೆ ಕೆರಳಿದ ವಿಶ್ವಾಸ್, ಅಮೇಠಿಯಲ್ಲಿ ಕಾಂಗ್ರೆಸ್ಗಾಗಿ ಪ್ರಚಾರ ಮಾಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡಾ ಅಲ್ಲಿ ನೋಂದಾಯಿತ ಮತದಾರರಲ್ಲ. ಆದ್ದರಿಂದ ಅವರಿಗೂ ಅಮೇಠಿ ಬಿಡುವಂತೆ ಹೇಳಿ ಎಂದು ಜಿಲ್ಲಾಡಳಿತಕ್ಕೆ ಸವಾಲೆಸಿದಿದ್ದಾರೆ.
ಅಮೇಠಿಯಲ್ಲಿ ಜಿಲ್ಲಾಡಳಿತ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಗೆಲ್ಲಿಸಲು ಯತ್ನಿಸುತ್ತಿದ್ದು, ಅದಕ್ಕಾಗಿ ತನ್ನ ಪಕ್ಷದ ಕಾರ್ಯಕರ್ತರ ಮೇಲೆ ಕಿಡಿಕಾರುತ್ತಿದ್ದಾರೆ ಎಂದು ವಿಶ್ವಾಸ್ ಆರೋಪಿಸಿದ್ದಾರೆ.
ಆದಾಗ್ಯೂ, ಕಾಂಗ್ರೆಸ್ ಕಾರ್ಯಕರ್ತರು ಖುಲ್ಲಂಖುಲ್ಲಾ ಹಣ ಹಂಚುತ್ತಿದ್ದರೂ, ಯಾರೊಬ್ಬರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿಶ್ವಾಸ್ ಹೇಳಿದ್ದಾರೆ.