ಶಾಸಕ, ಸಚಿವರ ವಿದೇಶ ಪ್ರವಾಸಕ್ಕೆ ಬ್ರೇಕ್
ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಸಚಿವರ ವಿದೇಶ ಪ್ರವಾಸ..
ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಸಚಿವರ ವಿದೇಶ ಪ್ರವಾಸಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.
ಶಾಸಕರು ಹಾಗೂ ಸಚಿವರು ವಿದೇಶ ಪ್ರವಾಸ ಕೈಗೊಳ್ಳದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸೂಚಿಸಿದ್ದಾರೆ.
ಬರದ ನಡುವೆಯೂ ಶಾಸಕ ತನ್ವೀರ್ ಸೇಠ ನೇತೃತ್ವದ 15 ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಸಿದ್ಧತೆ ನಡೆಸಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ವೀರ್ ಸೇಠ ನೇತೃತ್ವದ ವಿಧಾಸಭೆ ಭರವಸೆಗಳ ಸಮಿತಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಪ್ರವಾಸವನ್ನು ಕೈಬಿಟ್ಟಿತ್ತು.
ರಾಜ್ಯದಲ್ಲಿ ಬರ ಹಾಗೂ ಕುಡಿಯುವ ನೀರಿ ಸಮಸ್ಯೆ ಇರುವಾಗ ವಿದೇಶ ಪ್ರವಾಸ ಕೈಗೊಳ್ಳುವುದು ಬೇಡ ಎಂದು ಇತ್ತೀಚಿಗಷ್ಟೇ ಪರಮೇಶ್ವರ ಅವರು ಶಾಸಕರಿಗೆ ಮನವಿ ಮಾಡಿದ್ದರು. ಅಲ್ಲದೆ ವಿದೇಶ ಪ್ರವಾಸಕ್ಕೆ ತೆರಳುವುದು ಬೇಡ ಎಂದು ನಮ್ಮ ಪಕ್ಷದ ಶಾಸಕರಿಗೆ ಕಟ್ಟಪ್ಪಣೆ ನೀಡಿದ್ದೇನೆ. ಪ್ರವಾಸಕ್ಕೆ ಅನುಮತಿ ನೀಡಬೇಡಿ ಎಂದು ವಿಧಾನಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದರು.