ಜಗತ್ತಿನ ಶಕ್ತಿಶಾಲಿ ಸಾರ್ವಜನಿಕ ಸಂಸ್ಥೆಗಳ ಪಟ್ಟಿಯಲ್ಲಿ 54 ಭಾರತೀಯ ಸಂಸ್ಥೆ
ನ್ಯೂಯಾರ್ಕ್: ಫೋರ್ಬ್ಸ್ ನಿಯತಕಾಲಿಕೆಯ ಜಗತ್ತಿನ ಎರಡು ಸಾವಿರ ಸಾರ್ವಜನಿಕ ಸಂಸ್ಥೆಗಳ ವಾರ್ಷಿಕ ಪಟ್ಟಿಯಲ್ಲಿ ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಸೇರಿದಂತೆ 54 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ.
ಫೋರ್ಬ್ಸ್ ಗ್ಲೋಬಲ್ 2000 ವಿಶ್ವದ ಅತ್ಯಂತ ಶಕ್ತಿಶಾಲಿ ಸಾರ್ವಜನಿಕ ಕಂಪನಿಗಳ ಪಟ್ಟಿಯಲ್ಲಿ 54 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ. ಕಂಪನಿಗಳ ವಾರ್ಷಿಕ ಆದಾಯ ನಿವ್ವಳ ಲಾಭ, ಆಸ್ತಿ ಮತ್ತು ಮಾರುಕಟ್ಟೆ ಮೌಲ್ಯವನ್ನು ಆಧರಿಸಿ ರೂಪಿಸಲಾಗಿದೆ.
ಏಷ್ಯಾದ ಪೈಕಿ ಚೀನಾ ಮಾತ್ರ ಜಗತ್ತಿನ ಅಗ್ರ ಮೂರರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಅದು ಜಗತ್ತಿನ ಮೂರು ಅಗ್ರಗಣ್ಯ ಸಾರ್ವಜನಿಕ ಕಂಪನಿಗಳಿಗೆ ತವರೂರಾಗಿದ್ದು, ಶಕ್ತಿಶಾಲಿ ಸಾರ್ವಜನಿಕ ಸಂಸ್ಥೆಗಳ 10ರಲ್ಲಿ ಐದು ಸಂಸ್ಥೆಗಳು ಚೀನಾಕ್ಕೆ ಸೇರಿವೆ.
ಗ್ಲೋಬಲ್ 2000 ಕಂಪನಿಗಳ ಪೈಕಿ 564 ಅನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿರುವ ಅಮೆರಿಕ ತನ್ನ ಅಗ್ರಸ್ಥಾನದ ಪ್ರಾಬಲ್ಯ ಉಳಿಸಿಕೊಂಡಿದೆ. ಜಪಾನ್ ಒಟ್ಟಾರೆಯಾಗಿ 225 ಅಗ್ರ ಕಂಪನಿಗಳನ್ನು ಹೊಂದಿದ್ದರೆ ಭಾರತ ವಿಶ್ವದ ದೊಡ್ಡ ಕಂಪನಿಗಳ ಪಟ್ಟಿಯಲ್ಲಿ 54 ಸಂಸ್ಥೆಗಳನ್ನು ದಾಖಲಿಸಿಕೊಂಡಿದೆ.