ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಟೋಲ್ ಶುಲ್ಕ ವಿವಾದ: ಸ್ಥಳೀಯರಿಗೆ ರಿಯಾಯಿತಿ

ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗೇಟ್ ಬಳಿ ಟೋಲ್ ದರ ಹೆಚ್ಚಳವನ್ನು ಖಂಡಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಮಣಿದಿರುವ...

Vishwanath S
Updated On : 8 May 2014, 5:05 am

ಬೆಂಗಳೂರು: ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗೇಟ್ ಬಳಿ ಟೋಲ್ ದರ ಹೆಚ್ಚಳವನ್ನು ಖಂಡಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಮಣಿದಿರುವ ಸರ್ಕಾರ ಟೋಲ್ ದರ ವಿಚಾರದಲ್ಲಿ ಸ್ಥಳೀಯರಿಗೆ ಕೆಲವೊಂದು ರಿಯಾಯಿತಿ ನೀಡಿದೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟೋಲ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸ್ಥಳೀಯರಿಗೆ ಕೆಲವೊಂದು ರಿಯಾಯಿತಿ ನೀಡಿದ್ದು, 5 ಕಿ.ಮೀ ವ್ಯಾಪ್ತಿಯೊಳಗಿನ ಸ್ಥಳೀಯರಿಗೆ ಟೋಲ್ ಶುಲ್ಕದಿಂದ ಸಂಪೂರ್ಣ ರಿಯಾಯಿತಿ ನೀಡಲಾಗಿದೆ. ಅಲ್ಲದೆ 40 ಕಿ.ಮೀ ವ್ಯಾಪ್ತಿಯೊಳಗಿನ ಸ್ಥಳೀಯರಿಗೆ ಮಾಸಿಕ 220 ರು. ನಿಗದಿ ಪಡಿಸಲಾಗಿದೆ ಎಂದರು.

ಟೋಲ್ ಶುಲ್ಕ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಹೆದ್ದಾರಿ ಸಚಿವ ಆಸ್ಕರ್ ಫರ್ನಾಡಿಸ್ ಜತೆ ಚರ್ಚೆ ನಡೆಸಿದ್ದು, ಈ ಸಂಬಂಧ ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಿಲಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-7ರ ದೇವನಹಳ್ಳಿಯ ಸಾದಹಳ್ಳಿ ಗೇಟ್ ಬಳಿ ಟೋಲ್ ದರ ಏರಿಕೆಯನ್ನು ಖಂಡಿಸಿ ಕಳೆದ ಐದು ದಿನಗಳಿಂದ ಪ್ರತಿಭಟನೆ ನಡೆಯುತ್ತಿತ್ತು. ಟೋಲ್ ದರ ಏರಿಕೆ ಖಂಡಿಸಿ ನಿನ್ನೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಪ್ರತಿಭಟನೆಗೆ ಇಳಿದಿದ್ದರು. ಅಲ್ಲದೆ ಈ ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಟೋಲ್ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದ್ದರು. ಒಂದು ವೇಳೆ ಸರ್ಕಾರ ಟೋಲ್ ದರ ಇಳಿಕೆ ಮಾಡದಿದ್ದರೆ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಹೇಳಿದ್ದರು.

ಟೋಲ್ ದರ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಲಾರಿ ಮಾಲೀಕರು, ಟೂರಿಸ್ಟ್ ವಾಹನಗಳು, ತರಕಾರಿ ಸಾಗಣೆ ವಾಹನಗಳು, ಏರ್ಪೋರ್ಟ್ ಟ್ಯಾಕ್ಸಿ, ಸರಕು ಸಾಗಣೆ ಲಾರಿ, ಖಾಸಗಿ ಬಸ್ ಮಾಲೀಕರ ಸಂಘಟನೆಗಳು ಸೇರಿದಂತೆ ಎಲ್ಲಾ ಸಾರಿಗೆ ಸಂಘಟನೆಗಳು ಟೋಲ್ ಪ್ಲಾಜಾ ಬಳಿ ಪ್ರತಿಭಟನೆಯಲ್ಲಿ ತೊಡಗಿದ್ದರು.


ಸರ್ವಿಸ್ ರಸ್ತೆ ಅಗತ್ಯ: ಈ ಟೋಲ್ ರಸ್ತೆ ಮೂಲಕ ಅನೇಕ ಮಂದಿ ರೈತರು ಚಿಕ್ಕ ವಾಹನಗಳಲ್ಲಿ ತರಕಾರಿ, ಹಣ್ಣು ಹಂಪಲು ಸಾಗಿಸುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆದುದೊಯ್ಯಲೂ ಇದೇ ರಸ್ತೆಯನ್ನು ಅವಲಂಬಿಸಬೇಕು. ಇದರಿಂದ ಅವರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಹಿಂದಿದ್ದಷ್ಟೇ ಶುಲ್ಕ ವಸೂಲು ಮಾಡಬೇಕು. ಜತೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement