ವಾರಣಾಸಿಯಿಂದ ಸ್ಪರ್ಧಿಸಲು ಗಂಗಾ ಮಾತೆ ಪ್ರೇರಣೆ : ಮೋದಿ
ವಾರಣಾಸಿ: ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ವಾರಣಾಸಿಯಲ್ಲಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿ, ವಾರಣಾಸಿಯಿಂದ ಸ್ಪರ್ಧಿಸಲು ಗಂಗಾ ಮಾತೆಯೇ ಪ್ರೇರಣೆ ಎಂದರು.
ವಾರಣಾಸಿಯ ರೋಹಾನಿಯಾದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ, ನಿಮ್ಮ ಕನಸುಗಳನ್ನು ನಾವು ಈಡೇರಿಸುತ್ತೇವೆ. ಬಿಜೆಪಿ ಮೇಲೆ ಜನತೆ ಇಟ್ಟಿರುವ ನಂಬಿಕೆ ವ್ಯರ್ಥವಾಗಲು ಬಿಡುವುದಿಲ್ಲ. ವಾರಣಾಸಿಯಿಂದಲೇ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಿ, ವಾರಣಾಸಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ದೇಶದ ಪೂರ್ವ ಭಾಗದ ರಾಜ್ಯಗಳು ಈಗಲು ಅಭಿವೃದ್ಧಿಯಾಗದೆ ಅತ್ಯಂತ ದುರ್ಬಲ ರಾಜ್ಯಗಳಾಗಿವೆ ಎಂದು ಹೇಳಿದರು.
ಸಮಾವೇಶದಲ್ಲಿ ಭಾಗವಹಿಸಿದ್ದ ಅಪಾರ ಸಂಖ್ಯೆಯ ಜನಸ್ಥೋಮವನ್ನು ಕಂಡು ಬೆರಗಾದ ಮೋದಿ, ದೇಶದ ಅಭಿವೃದ್ಧಿಯೇ ನನ್ನ ಏಕೈಕ ಅಜೆಂಡಾ ಅದೇ ಹಾದಿಯಲ್ಲಿ ಸಾಗುತ್ತೇನೆ. ನನಗೆ ಅಪಾರ ಬೆಂಬಲ ನೀಡುತ್ತಿರುವ ನಿಮ್ಮ ಎಲ್ಲಾ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದರು.
ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ನನಗೆ ಬಲವಾದ ಸರ್ಕಾರ ನೀಡಿ, ನಾನು ನಿಮಗೆ ಪ್ರಬಲ ಭಾರತವನ್ನು ನೀಡುತ್ತೇನೆ. ಜೊತೆಗೆ ದೇಶದ ರಕ್ಷಣೆ ವಿಚಾರದಲ್ಲಿ ಎಂದೆದಿಗೂ ಹಿನ್ನೆಡೆಯಾಗಲು ಬಿಡುವುದಿಲ್ಲ ಎಂದರು.
ಏತನ್ಮಧ್ಯೆ, ವಾರಣಾಸಿಯ ಕೆಲ ರ್ಯಾಲಿಗಳಿಗೆ ಅನುಮತಿ ನೀಡದ ಚುನಾವಣಾ ಆಯೋಗದ ವಿರುದ್ಧ ಮೋದಿ ಬೇಸರ ವ್ಯಕ್ತಪಡಿಸಿದರು. ಯಾವ ಕಾರಣಕ್ಕಾಗಿ ಆಯೋಗ ನನ್ನನ್ನು ನಿರ್ಬಂಧಿಸುತ್ತಿದೆ ಎಂದು ಗೊತ್ತಾಗುತ್ತಿಲ್ಲ ಎಂದರು.