ಅನುಮತಿ ನಿರಾಕರಣೆ ಹಿಂದೆ ರಾಜಕೀಯ ಷಡ್ಯಂತ್ರ: ಅರುಣ್ ಜೇಟ್ಲಿ
ವಾರಣಾಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ...
ವಾರಣಾಸಿ: ವಾರಣಾಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ರ್ಯಾಲಿಗೆ ಆಯೋಗದ ಅನುಮತಿ ನಿರಾಕರಣೆ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಎಂದು ಬಿಜೆಪಿ ಮುಖಂಡ ಅರುಣ್ ಜೇಟ್ಲಿ ಅವರು ಶನಿವಾರ ಆರೋಪಿಸಿದ್ದಾರೆ.
ನರೇಂದ್ರ ಮೋದಿ ಅವರ ರ್ಯಾಲಿಗೆ ಅನುಮತಿ ನಿರಾಕರಿಸಿದ್ದ ಸ್ಥಳದಲ್ಲೇ ರಾಹುಲ್ ಗಾಂಧಿಗೆ ರೋಡ್ ಶೋ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅರುಣ್ ಜೇಟ್ಲಿ, ಮೋದಿ ರ್ಯಾಲಿಗೆ ಅನುಮತಿ ನಿರಾಕರಿಸಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ನಡೆದಿದೆ ಎಂದರು.
ಇದೇ ವೇಳೆ, ನಿನ್ನೆ ಮುಖ್ಯ ಚುನಾವಣಾ ಆಯೋಗದ ಆಯುಕ್ತರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭದ್ರತಾ ಕಾರಣಗಳಿಂದ ಮೋದಿ ರ್ಯಾಲಿಗೆ ಅನುಮತಿ ನಿರಾಕರಿಸಲಾಯಿತು ಎಂಬ ಆಯೋಗದ ವಾದಕ್ಕೆ ಪ್ರತಿಕ್ರಿಯಿಸಿರುವ ಅರುಣ್ ಜೇಟ್ಲಿ, ರಾಹುಲ್ ಗಾಂಧಿ ರ್ಯಾಲಿಗೆ ಭದ್ರತೆ ನೀಡುವುದಾದರೆ ಮೋದಿ ರ್ಯಾಲಿಗೆ ಮಾತ್ರ ಭದ್ರತೆ ಒದಗಿಸಲು ಕಷ್ಟಸಾಧ್ಯ? ಮೋದಿಗೆ ರ್ಯಾಲಿಗೆ ಮಾತ್ರ ಅನುಮತಿ ನಿರಾಕರಿಸಿರುವ ಆಯೋಗ ಇತರ 3 ಪಕ್ಷಗಳ ರ್ಯಾಲಿಗಳಿಗೆ ನಿರ್ಬಂಧಯಾಕ್ಕಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರಶ್ನಿಸಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದಲ್ಲಿ ಯಾರು, ಎಲ್ಲಿ ಬೇಕಾದರು ಸಭೆ ಸಮಾರಂಭಗಳನ್ನು ನಡೆಸುವ ಸ್ವತಂತ್ರವಿದೆ. ಅಂತದರಲ್ಲಿ ಭವಿಷ್ಯದ ಪ್ರಧಾನಿ ಎಂದೇ ಬಿಂಬಿತರಾಗಿರುವ ನರೇಂದ್ರ ಮೋದಿ ರ್ಯಾಲಿಗೆ ಅನುಮತಿ ನಿರಾಕರಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
ವಾರಣಾಸಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ನರೇಂದ್ರ ಮೋದಿ ಅವರ ಕೆಲವೊಂದು ರ್ಯಾಲಿಗಳಿಗೆ ಚುನಾವಣಾ ಆಯೋಗ ಅನುಮತಿ ನಿರಾಕರಿಸಿತ್ತು. ಈ ಹಿನ್ನೆಲೆಯ್ಲಲಿ ಬಿಜೆಪಿ ಹಾಗೂ ಆಯೋಗದ ನಡುವೆ ಶೀತಲ ಸಮರ ಶುರುವಾಗಿತ್ತು. ಆಯೋಗ ಇತರ ಪಕ್ಷಗಳ ರ್ಯಾಲಿಗೆ ಅನುಮತಿ ನೀಡುತ್ತಾ ಮಲತಾಯಿ ಧೋರಣೆ ತೋರುತ್ತಿದೆ ಎಂದು ಬಿಜೆಪಿ ಆರೋಪಿಸುತ್ತಿದೆ.
ದೇಶದಾದ್ಯಂತ ಸೋಮವಾರ 9ನೇ ಹಂತದ ಕೊನೆಯ ಮತದಾನ ನಡೆಯುತ್ತಿದ್ದು, ಇದರಲ್ಲಿ ವಾರಣಾಸಿ ಕ್ಷೇತ್ರವು ಸೇರಿಕೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವುದರಿಂದ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ಕೊನೆಯ ಕಸರತ್ತು ನಡೆಸುತ್ತಿವೆ.