ಸಿಎಂ ವಿರುದ್ಧ ಹಿರಣ್ಣಯ್ಯ ಅವಾಚ್ಯ ಪದ ಬಳಕೆ: ಪ್ರತಿಭಟನೆ
ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಮೈಸೂರು: ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಅವರ ಸಂಪುಟ ಸಚಿವರ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದಾರೆ.
ಮೈಸೂರಿನ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ನಾಗಾಸ್ ನವಸಿರಿ ಪ್ರಶಸ್ತಿ ಸಮಾರಂಭದಲ್ಲಿ ಮಾಸ್ಟರ್ ಹಿರಣ್ಣಯ್ಯ ಅವರು ಪಾಲ್ಗೊಂಡು ಮಾತನಾಡಿದ್ದರು. 'ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾದ ನಂತರ ಅವರ ನಡವಳಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅವರ ಕಾರ್ಯ ವೈಖರಿ ಕೂಡ ಬದಲಾಗಿದೆ' ಎಂದು ಹೇಳಿದ್ದರು. ಅಲ್ಲದೆ ಸಿದ್ದರಾಮಯ್ಯ ಮತ್ತು ಸಂಪುಟ ಸಚಿವರ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದರು.
ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಸ್ಥಳೀಯ ಕಾಂಗ್ರೆಸ್ ಶಾಸಕ ಸೋಮಶೇಖರ್ ಅವರ ಬೆಂಬಲಿಗರು ಕಾರ್ಯಕ್ರಮದ ಮೇಲೆ ದಾಳಿ ಮಾಡಿ ಪೀಠೋಪಕರಣ ಧ್ವಂಸಗೊಳಿಸಿದ್ದಾರೆ. ಅಲ್ಲದೆ ಮಾಸ್ಟರ್ ಹಿರಣ್ಣಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಮಾಸ್ಟರ್ ಹಿರಣ್ಣಯ್ಯ ಕ್ಷಮೆಯಾಚನೆ
ಇದೇ ವೇಳೆ ತಮ್ಮಿಂದಾದ ಅಚಾತುರ್ಯವನ್ನು ಅರಿತ ಹಿರಿಯ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಬೇಷರತ್ ಕ್ಷಮೆಯಾಚಿಸಿದ್ದಾರೆ. 'ಸಮಾರಂಭದಲ್ಲಿ ನಾನು ಸಿದ್ಧರಾಮಯ್ಯ ಅವರ ವಿರುದ್ಧ ಮಾತನಾಡಿದ್ದು ನಿಜ. ಆದರೆ ನಾನು ಅವರನ್ನು ವೈಯುಕ್ತಿಕವಾಗಿ ನಿಂದನೆ ಮಾಡಿಲ್ಲ. ಅವರ ಕಾರ್ಯವೈಖರಿ ಕುರಿತು ನನ್ನ ಅಸಮಾಧಾನ ಹೊರಹಾಕುವ ಭರದಲ್ಲಿ ನನ್ನಿಂದ ಈ ಅಚಾತುರ್ಯವಾಗಿದೆ.
ನಾನು ಕಳೆದ 69 ವರ್ಷಗಳಿಂದ ರಂಗಭೂಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನನಗೀಗ 81 ವರ್ಷ ವಯಸ್ಸಾಗಿದೆ. ನನ್ನ ವಯಸ್ಸು ಮತ್ತು ನನ್ನ ಮಾನಸಿಕ ಸ್ಥಿತಿ ನನ್ನಿಂದ ಇಂತಹ ಹೇಳಿಕೆ ಆಡಿಸಿರಬಹುದು. ಆದರೆ ನಾನು ನನ್ನ ತಪ್ಪು ಅರಿತಿದ್ದೇನೆ. ಹೀಗಾಗಿ ನಾನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷ ಮತ್ತು ಅಖಂಡ ಕರ್ನಾಟಕ ಜನತೆಯಲ್ಲಿ ಭೇಷರತ್ ಕ್ಷಮೆ ಯಾಚಿಸುತ್ತೇನೆ. ಈ ಘಟನೆಯಿಂದ ನನ್ನ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಸ್ನೇಹಕ್ಕೆ ತೊಂದರೆಯಾಗುವುದು ಬೇಡ. ಶೀಘ್ರದಲ್ಲಿಯೇ ನಾನು ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ. ಈ ವಿಚಾರವನ್ನು ದೊಡ್ಡದು ಮಾಡುವುದು ಬೇಡ ಎಂದು ಹಿರಣ್ಣಯ್ಯ ಅವರು ಮನವಿ ಮಾಡಿದ್ದಾರೆ.
ಸಿದ್ದು ಭೇಟಿ ಮಾಡಿದ ಹಿರಣ್ಣಯ್ಯ
ಈ ನಡುವೆ ತಮ್ಮ ವಿವಾದಾತ್ಮಕ ಹೇಳಿಕೆಯ ವಿರುದ್ಧ ಪ್ರತಿಭಟನೆ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ, ಮೈಸೂರಿನ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿದ ಹಿರಣ್ಣಯ್ಯ ಅವರು ಕ್ಷಮೆಯಾಚಿಸಿದ್ದಾರೆ. ನನ್ನ ವಯಸ್ಸು ಮತ್ತು ಮಾನಸಿಕ ಪರಿಸ್ಥಿತಿ ಇಂತಹ ಹೇಳಿಕೆ ನೀಡುವಂತೆ ಮಾಡಿದ್ದು, ವೈಯುಕ್ತಿಕವಾಗಿ ನಾನು ನಿಮ್ಮ ನಿಂದನೆ ಮಾಡಿಲ್ಲ. ಹೀಗಾಗಿ ತಮ್ಮನ್ನು ಕ್ಷಮಿಸುವಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಲ್ಲಿ ಹಿರಣ್ಣಯ್ಯ ಮನವಿ ಮಾಡಿದ್ದಾರೆ. ಇತ್ತ ಹಿರಣ್ಣಯ್ಯ ಅವರು ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿರುವ ಮಾಹಿತಿ ತಿಳಿದ ಕಾಂಗ್ರೆಸ್ ಕಾರ್ಯಕರ್ತರು ಅಲ್ಲಿಗೂ ಅಗಮಿಸಿ ಹಿರಣ್ಣಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ತಿಳಿದೇ ಇಂತಹ ಪದಬಳಕೆ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಾರ್ಯಕರ್ತರನ್ನು ಸಮಾಧಾನಗೊಳಿಸಿದ್ದಾರೆ. ಅಲ್ಲದೆ ಸ್ವತಃ ಅವರೇ ಹಿರಣ್ಣಯ್ಯ ಅವರನ್ನು ಅವರ ಕಾರಿನವರೆಗೂ ಕರೆತಂದು ಬೀಳ್ಕೊಟ್ಟಿದ್ದಾರೆ. ಅಂತೆಯೇ ಹಿರಣ್ಣಯ್ಯ ಅವರಿಗೆ ಪೊಲೀಸ್ ರಕ್ಷಣೆ ನೀಡಿ ಬೆಂಗಳೂರಿನ ಮನೆಗೆ ತಲುಪಿಸುವಂತೆ ಪೊಲೀಸ್ ವರಿಷ್ಠರಿಗೆ ಸೂಚನೆ ನೀಡಿದ್ದಾರೆ.
ಒಟ್ಟಾರೆ ತಮ್ಮ ಹೇಳಿಕೆಯಿಂದ ಎದ್ದಿದ್ದ ವಿವಾದಕ್ಕೆ ಮಾಸ್ಟರ್ ಹಿರಣ್ಣಯ್ಯ ಅವರೇ ತೆರೆ ಎಳೆದಿದ್ದಾರೆ.