ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮತಗಟ್ಟೆ ಸಮೀಕ್ಷೆ: ಮಾಧ್ಯಮಗಳು ಮುಖಭಂಗ ಅನುಭವಿಸಿದ್ದೂ ಇದೆ

ಈ ಬಾರಿ ಬಹುತೇಕ ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದು ಬಹಿರಂಗವಾಗಿದೆ.

Lingaraj Badiger
Updated On : 14 May 2014, 4:36 am

ನವದೆಹಲಿ: ಈ ಬಾರಿ ಬಹುತೇಕ ಮಾಧ್ಯಮಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ ಎಂಬುದು ಬಹಿರಂಗವಾಗಿದೆ. ಸಮೀಕ್ಷೆಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿ ಫಲಿತಾಂಶಕ್ಕೂ ಮುನ್ನವೇ ಸರ್ಕಾರ ರಚನೆ ಕುರಿತು ಲೆಕ್ಕಾಚಾರದಲ್ಲಿ ತೊಡಗಿದೆ. ಆದರೆ ಮಾಧ್ಯಮಗಳು ನಡೆಸುವ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳೇ ಅಂತಿಮವಾಗುವುದಿಲ್ಲ. ಹಲವು ಬಾರಿ ಫಲಿತಾಂಶ ವ್ಯತಿರಿಕ್ತವಾಗಿ ಬಂದ ಉದಾಹರಣೆಗಳು ಇವೆ. ಇದರಿಂದ ಮಾಧ್ಯಮಗಳು ಮುಖಭಂಗ ಅನುಭವಿಸಿದ್ದೂ ಇದೆ.

1996ರಲ್ಲಿ ಮೊಟ್ಟ ಮೊದಲ ಬಾರಿಗೆ ದೂರದರ್ಶನ ಮತಗಟ್ಟೆ ಸಮೀಕ್ಷೆ ನಡೆಸಿತ್ತು. ಇದಾದ ಬಳಿಕ ಮತಗಟ್ಟೆ ಸಮೀಕ್ಷೆ ನಡೆಸುವುದು ಒಂದು ಸಂಪ್ರದಾಯವೇ ಆಗಿ ಹೋಗಿದೆ ಮತ್ತು ಅದು ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತ ಹೋಯಿತು. ಅಲ್ಲದೆ ಹಲವು ಬಾರಿ ಮಾಧ್ಯಮ ಸಮೀಕ್ಷೆಗಳು ಹುಸಿಯಾದ ಉದಾಹರಣೆಗಳು ಇವೆ. ಕಳೆದ ನಾಲ್ಕು ಲೋಕಸಭಾ ಚುನಾವಣೆಗಳಲ್ಲಿ ನಡೆಸಲಾದ ಸಮೀಕ್ಷೆಗಳಿಗೂ ಮತ್ತು ಫಲಿತಾಂಶಕ್ಕೂ ಸಾಕಷ್ಟು ವ್ಯತ್ಯಾಸ ಇದೆ.

2004ರ ಲೋಕಸಭಾ ಚುನಾವಣೆ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವ ಎನ್‌ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಮಾಧ್ಯಮ ಸಮೀಕ್ಷೆಗಳು ಹೇಳಿದ್ದವು. ಆದರೆ ಫಲಿತಾಂಶ ಬಂದಿದ್ದೆ ಬೇರೆ.

ಎನ್‌ಡಿಟಿವಿ ಹಾಗೂ ಇಂಡಿಯನ್ ಎಕ್ಸ್‌ಪ್ರೆಸ್ ನಡೆಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 230ರಿಂದ 250, ಯುಪಿಎಗೆ 190ರಿಂದ 205, ಇತರರಿಗೆ 100ರಿಂದ 120 ಸ್ಥಾನಗಳು, ಅಜ್‌ತಕ್ ಹಾಗೂ ಒಆರ್‌ಜಿ ಸಮೀಕ್ಷೆ ಪ್ರಕಾರ, ಎನ್‌ಡಿಎ 248, ಯುಪಿಎಗೆ 190 ಹಾಗೂ ಇತರರಿಗೆ 105 ಸ್ಥಾನ, ಔಟ್‌ಲುಕ್ ಸಮೀಕ್ಷೆ ಪ್ರಕಾರ, ಎನ್‌ಡಿಎಗೆ 280ರಿಂದ 290, ಯುಪಿಎಗೆ 159ರಿಂದ 169 ಹಾಗೂ ಇತರರಿಗೆ 89ರಿಂದ 99 ಸ್ಥಾನಗಳು ಬರಲಿವೆ ಎಂದು ಹೇಳಲಾಗಿತ್ತು. ಆದರೆ ವಾಸ್ತವವಾಗಿ ಫಲಿತಾಂಶದಲ್ಲಿ ಎನ್‌ಡಿಎಗೆ ಸಿಕ್ಕಿದ್ದು ಕೇವಲು 189 ಸ್ಥಾನ ಮಾತ್ರ. ಈ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಕೇಂದ್ರದಲ್ಲಿ ಅಧಿಕಾರಕ್ಕೇರಿತು.

ಇನ್ನು 2009ರ ಸಮೀಕ್ಷೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿದ್ದು, ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ನೇತೃತ್ವದ ಯುಪಿಎ ಅತಿ ದೊಡ್ಡ ಮೈತ್ರಿಕೂಟವಾಗಿ ಹೊರಹೊಮ್ಮಿತು. ಸ್ಟಾರ್ ನ್ಯೂಸ್ ಹಾಗೂ ಎಸಿ ನಿಲ್ಸನ್ ನಡೆಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 197, ಯುಪಿಎಗೆ 199 ಹಾಗೂ ಇತರರಿಗೆ 136 ಸ್ಥಾನ. ಎನ್‌ಡಿಟಿವಿ ಸಮೀಕ್ಷೆ ಪ್ರಕಾರ, ಬಿಜೆಪಿಗೆ 177, ಯುಪಿಎಗೆ 216 ಹಾಗೂ ಇತರರಿಗೆ 150 ಸ್ಥಾನಗಳು ದೊರೆಯಲಿವೆ ಎಂದು ಹೇಳಲಾಗಿತ್ತು. ಆದರೆ ವಾಸ್ತವವಾಗಿ ಫಲಿತಾಂಶ ಬಂದಿದ್ದು, ಎನ್‌ಡಿಎಗೆ 159, ಯುಪಿಎಗೆ 262 ಮತ್ತು ಇತರರು 79 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು.

1999ರಲ್ಲಿ ಟೈಮ್ಸ್ ಪೋಲ್ ನಡೆಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 332, ಯುಪಿಎಗೆ 138 ಸ್ಥಾನ, ಔಟ್‌ಲುಕ್ ಹಾಗೂ ಸಿಎಂಎಸ್ ಸಮೀಕ್ಷೆ ಪ್ರಕಾರ, ಎನ್‌ಡಿಎಗೆ 319ರಿಂದ 329, ಯುಪಿಎಗೆ 135ರಿಂದ 145 ಸ್ಥಾನ ಹಾಗೂ ಇತರರಿಗೆ 34ರಿಂದ 39 ಸ್ಥಾನ, ಇಂಡಿಯಾ ಟುಡೆ ನಡೆಸಿದ್ದ ಸಮೀಕ್ಷೆಯಲ್ಲಿ ಎನ್‌ಡಿಎಗೆ 332ರಿಂದ 336, ಯುಪಿಎಗೆ 132ರಿಂದ 146 ಹಾಗೂ ಇತರರಿಗೆ 70ರಿಂದ 80 ಸ್ಥಾನ ಬರಲಿವೆ ಎನ್ನಲಾಗಿತ್ತು. ಆದರೆ ಅಂತಿಮ ಫಲಿತಾಂಶ ಪ್ರಕಟವಾದಾಗ ಎನ್‌ಡಿಎಗೆ 296, ಯುಪಿಎಗೆ 134 ಮತ್ತು ಇತರರಿಗೆ 113 ಸ್ಥಾನಗಳು ಬಂದಿದ್ದವು.

1998ರಲ್ಲಿ ಡಿಆರ್‌ಎಸ್ ನಡೆಸಿದ್ದ ಮತಗಟ್ಟೆ ಸಮೀಕ್ಷೆಯಲ್ಲಿ ಎನ್‌ಡಿಎಗೆ 249, ಯುಪಿಎಗೆ 155, ತೃತೀಯ ರಂಗಕ್ಕೆ 102 ಸ್ಥಾನ ಹಾಗೂ ಇತರರಿಗೆ 37 ಸ್ಥಾನ. ಔಟ್‌ಲುಕ್ ಸಮೀಕ್ಷೆ ಪ್ರಕಾರ, ಎನ್‌ಡಿಎಗೆ 238, ಯುಪಿಎಗೆ 149, ತೃತೀಯ ರಂಗ 123 ಹಾಗೂ ಇತರರಿಗೆ 33 ಸ್ಥಾನಗಳು. ಇಂಡಿಯಾ ಟುಡೆ ಸಮೀಕ್ಷೆಯಲ್ಲಿ ಎನ್‌ಡಿಎಗೆ 214, ಯುಪಿಎಗೆ 164, ತೃತೀಯ ರಂಗಕ್ಕೆ 127 ಸ್ಥಾನ ಮತ್ತು ಇತರರಿಗೆ 38 ಸ್ಥಾನಗಳು ಬರಲಿವೆ ಎಂದು ಹೇಳಲಾಗಿತ್ತು. ಆದರೆ ವಾಸ್ತವ ಫಲಿತಾಂಶದಲ್ಲಿ ಎನ್‌ಡಿಎಗೆ ಸಿಕ್ಕಿದ್ದು 252, ಯುಪಿಎಗೆ 166, ತೃತೀಯ ರಂಗಕ್ಕೆ 96 ಮತ್ತು ಇತರರು 23 ಸ್ಥಾನಗಳಲ್ಲಿ ಗೆಲವು ಸಾಧಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement