ಚಿಕ್ಕಮಗಳೂರು-ಉಡುಪಿಯಲ್ಲಿ ಶೋಭಾ ಕರಂದ್ಲಾಜೆ ಗೆಲುವು
ಉಡುಪಿ: ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಗೆಲುವು ಸಾಧಿಸಿದ್ದಾರೆ.
ಈ ಕ್ಷೇತ್ರದಲ್ಲಿ 13,86,515 ಮತದಾರರ ಪೈಕಿ 10,32,871 (ಶೇ. 74.49) ಮಂದಿ ಮತದಾನದಲ್ಲಿ ಭಾಗವಹಿಸಿದ್ದು, ಅವರಲ್ಲಿ ಅರ್ಧಕ್ಕೂ ಹೆಚ್ಚು ಅಂದರೆ 5,81,168 (ಶೇ. 56.26) ಮಂದಿ ಮತದಾರರು ಲೋಕಸಭೆಯಲ್ಲಿ ತಮ್ಮ ಕ್ಷೇತ್ರದ ಪ್ರತಿನಿಧಿಯನ್ನಾಗಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರನ್ನು ಆರಿಸಿದ್ದಾರೆ.
2012ರಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷದ ಕೆ. ಜಯಪ್ರಕಾಶ್ ಹೆಗ್ಡೆ ಅವರು ಈ ಬಾರಿ 3,99,525 (ಶೇ. 38.68) ಮತಗಳಿಸಿದ್ದು, 1,81,643 ಮತಗಳ ಅಂತರದಿಂದ ಶೋಭಾ ಕರಂದ್ಲಾಜೆ ವಿರುದ್ಧ ಸೋತಿದ್ದಾರೆ.
ಠೇವಣಿ ಕಳೆದುಕೊಂಡವರು: ಇವರಿಬ್ಬರ ನಡುವೆ ತಮ್ಮ ಮಾತಿನಿಂದಲೇ ಗಮನ ಸೆಳೆದಿದ್ದ ಜೆಡಿಎಸ್ ಅಭ್ಯರ್ಥಿ ಧನಂಜಯ ಕುಮಾರ್ ಕೇವಲ 14,895 ಮತಗಳನ್ನು ಮಾತ್ರ ಗಳಿಸಿ, ಠೇವಣಿಯನ್ನೂ ಕಳೆದುಕೊಂಡಿದ್ದಾರೆ.
ಕಣದಲ್ಲಿ ಒಟ್ಟು 11 ಮಂದಿ ಅಭ್ಯರ್ಥಿಗಳಿದ್ದರು. ಉಳಿದ ಅಭ್ಯರ್ಥಿಗಳಾದ ಝಾಕೀರ್ ಹುಸೇನ್ (ಬಿಎಸ್ಪಿ) 7449, ಎಸ್. ವಿಜಯಕುಮಾರ್ (ಸಿಪಿಐ) 9,691, ಗುರುದೇವ್ (ಆಮ್ ಆದ್ಮಿ ಪಕ್ಷ) 6,049, ಸಿ.ಜೆ. ಜಗನ್ನಾಥ (ಸಿಪಿಐ ಎಂಎಲ್ ರೆಡ್ ಸ್ಟಾರ್) 1612, ಮೈನುದ್ದೀನ್ ಖಾನ್ (ಪಕ್ಷೇತರ) 1214, ಜಿ. ಮಂಜುನಾಥ್ (ಪಕ್ಷೇತರ) 1,089, ಶ್ರೀನಿವಾಸ ಪೂಜಾರಿ (ಪಕ್ಷೇತರ) 1899, ಸುಧೀರ್ ಕಾಂಚನ್ (ಪಕ್ಷೇತರ) 1,689 ಮತಗಳನ್ನು ಗಳಿಸಿದ್ದು, ಠೇವಣಿ ಕಳೆದುಕೊಂಡಿದ್ದಾರೆ.