ಪ್ರಧಾನಿ ಹುದ್ದೆಗೆ ಡಾ.ಸಿಂಗ್ ರಾಜಿನಾಮೆ
ಸಿಂಗ್ ರಾಜಿನಾಮೆ ಅಂಗೀಕಾರ, ನೂತನ ಸರ್ಕಾರಕ್ಕೆ ಶುಭ ಕೋರಿದ ನಿರ್ಗಮಿತ ಪ್ರಧಾನಿ
ನವದೆಹಲಿ: ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಹುದ್ದೆಗೆ ಶನಿವಾರ ರಾಜಿನಾಮೆ ಸಲ್ಲಿಸಿದ್ದಾರೆ.
ಪ್ರಧಾನಿ ಸಿಂಗ್ ಅವರು ಇಂದು ಮಧ್ಯಾಹ್ನ 12.30ರ ಸುಮಾರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ್ದು, ಸಿಂಗ್ ರಾಜಿನಾಮೆಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಗೀಕರಿಸಿದ್ದಾರೆ.
ಇದಕ್ಕು ಮುನ್ನ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದ ನಿರ್ಗಮಿತ ಪ್ರಧಾನಿ ಮನಮೋಹನ್ ಸಿಂಗ್ ಅವರು, ಕಳೆದ 10 ವರ್ಷಗಳಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಯುಪಿಎ ಸರ್ಕಾರ ಸಾಧನೆ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ. ಅಲ್ಲದೆ ಶೀಘ್ರದಲ್ಲೇ ನರೇಂದ್ರ ಮೋದಿ ನೇತೃತ್ವದಲ್ಲಿ ರಚನೆಯಾಗುತ್ತಿರುವ ನೂತನ ಸರ್ಕಾರಕ್ಕೆ ಸಿಂಗ್ ಶುಭ ಕೋರಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೆ, ನಾನು ಪ್ರಧಾನಿಯಾಗಿ ಮಾಡುತ್ತಿರುವ ಕೊನೆ ಭಾಷಣ ಇದು, ನೀವು ನೀಡಿರುವ ಆದೇಶವನ್ನು ನಾನು ಗೌರವಿಸುತ್ತೇನೆ ಮತ್ತು ದೇಶದ ಜನರ ತೀರ್ಪಿಗೆ ಎಲ್ಲರೂ ತಲೆಬಾಗಬೇಕು. ನಾನು ಪ್ರಧಾನಿ ಸ್ಥಾನದಿಂದ ನಿರ್ಗಮಿಸಿದ ಬಳಿಕವೂ ನಿಮ್ಮ ಈ ಪ್ರೀತಿ ವಿಶ್ವಾಸ ಹೀಗೆ ಇರಲಿ ಎಂದು ಕೇಳಿಕೊಂಡರು.
ಕಳೆದ 10 ವರ್ಷಗಳಲ್ಲಿ ಭಾರತ ಈ ಹಿಂದಿಗಿಂತ ಈಗ ಹೆಚ್ಚು ಸದೃಢವಾಗಿದೆ. ನನ್ನಿಂದ ಎಷ್ಟು ಸಾಧ್ಯವೋ ಅಷ್ಟು ಉತ್ತಮ ಆಡಳಿತವನ್ನು ನೀಡಿದ್ದೇನೆ. ನನ್ನ ಜೀವನ ಒಂದು ತೆರೆದ ಪುಸ್ತಕವಿದ್ದಂತೆ ಎಂದು ಸಿಂಗ್ ತಮ್ಮ ವಿದಾಯ ಭಾಷಣದಲ್ಲಿ ಹೇಳಿದ್ದಾರೆ.